Kodagu | ನಿವೇಶನಕ್ಕಾಗಿ ಆಗ್ರಹಿಸಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ

ಮಡಿಕೇರಿ : ಕೊಡಗು ಜಿಲ್ಲೆಯಲ್ಲಿ ಸ್ವಂತ ಸೂರಿಲ್ಲದೆ ಸಂಕಷ್ಟದ ಬದುಕು ಸಾಗಿಸುತ್ತಿರುವ ಸುಮಾರು 60 ಸಾವಿರಕ್ಕೂ ಅಧಿಕ ನಿವೇಶನ ರಹಿತ ಬಡವರಿಗೆ ತಲಾ 5 ಸೆಂಟ್ ನಿವೇಶನ ಹಂಚಿಕೆ ಮಾಡಲು ತುರ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿ ಮತ್ತು ನವ ಕರ್ನಾಟಕ ನಿರ್ಮಾಣ ಆಂದೋಲನ ಸಮಿತಿಯ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.
ಬೇಡಿಕೆ ಈಡೇರಿಸಲು ಸರಕಾರಕ್ಕೆ ಒಂದು ತಿಂಗಳ ಗಡುವು ನೀಡಿದ ಪ್ರತಿಭಟನಾಕಾರರು, ಸೂಕ್ತ ಸ್ಪಂದನೆ ದೊರೆಯದೇ ಇದ್ದಲ್ಲಿ ರಾಜ್ಯ ಮಟ್ಟದ ಹೋರಾಟವನ್ನು ರೂಪಿಸುವುದಾಗಿ ಎಚ್ಚರಿಕೆ ನೀಡಿದರು.
ಭೂಕಬಳಿಕೆದಾರರ ಬಳಿ ಇರುವ ಸರಕಾರಿ ಭೂಮಿಯ ಒತ್ತುವರಿಯನ್ನು ತಕ್ಷಣ ತೆರವು ಮಾಡಬೇಕು. ಬಡವರಿಗೆ ನಿವೇಶನ ಹಂಚಿಕೆ ಮಾಡಲು ಪ್ರತಿ ಗ್ರಾ.ಪಂ ವ್ಯಾಪ್ತಿಯಲ್ಲಿ 50 ಎಕರೆ ಭೂಮಿ ಕಾಯ್ದಿರಿಸಬೇಕು. ಮಡಿಕೇರಿ ತಾಲ್ಲೂಕಿನ ಹೊದ್ದೂರು ಗ್ರಾಮ, ಪೊನ್ನಂಪೇಟೆಯ ಬಿ.ಶೆಟ್ಟಿಗೇರಿ, ಚೆಟ್ಟಳ್ಳಿ ಗ್ರಾ.ಪಂ ವ್ಯಾಪ್ತಿಯ ಪೊನ್ನತ್ ಮೊಟ್ಟೆ ಭಾಗದಲ್ಲಿ ಮತ್ತು ಮಾದಾಪುರದ ಕುಂಬೂರು ಗ್ರಾಮದಲ್ಲಿ ಗುಡಿಸಲುಗಳನ್ನು ನಿರ್ಮಿಸಿಕೊಂಡು ನಿವೇಶನಕ್ಕಾಗಿ ಹೋರಾಟ ನಡೆಸುತ್ತಿರುವವರ ಬೇಡಿಕೆಯನ್ನು ಆಲಿಸಲು ಶಾಸಕರು ಹಾಗೂ ಜಿಲ್ಲಾಧಿಕಾರಿಗಳು ಖುದ್ದು ಭೇಟಿ ನೀಡಬೇಕು.
ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ವ್ಯಾಪ್ತಿಯಲ್ಲಿರುವ 20 ಸಾವಿರ ನಿವೇಶನ ರಹಿತರಿಗೆ ಹಾಗೂ ಕುಶಾಲನಗರ ತಾಲ್ಲೂಕಿನಲ್ಲಿರುವ 6,500 ಬಡ ಕುಟುಂಬಗಳಿಗೆ ನಿವೇಶನ ಹಂಚಿಕೆ ಮಾಡಲು ಕ್ರಮ ಕೈಗೊಳ್ಳಬೇಕು. ಕಾಕೋಟುಪರಂಬು, ಹಾಲುಗುಂದ, ಬಿಳಿಬಾಣೆ, ಹೊದ್ದೂರಿನ ಭಗವತಿ ಕಾಲೋನಿ, ಕುಂಬಳದಾಳು, ನರಿಯಂದಡ ವ್ಯಾಪ್ತಿಯ ಬಡವರ ಮನೆಗಳಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ಆಗ್ರಹಿಸಿದರು.
ಒತ್ತುವರಿಯಾಗಿರುವ ಸರಕಾರಿ ಭೂಮಿಯನ್ನು ತೆರವುಗೊಳಿಸಿ ಭೂ ಹೀನಾ ಹಾಗೂ ನಿವೇಶನರಹಿತ ಕುಟುಂಬಗಳಿಗೆ ತಲಾ 5 ಎಕರೆಯಂತೆ ಕೃಷಿ ಭೂಮಿಯಾಗಿ ಭೂ ಮಂಜೂರಾತಿ ನೀಡಬೇಕು. ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡಗಳು ವಾಸವಿರುವ ಕಾಲೋನಿಗಳಿಗೆ ವಿಶೇಷವಾಗಿ ಸ್ಮಶಾನ ಜಾಗ, ಕಾಂಕ್ರೀಟ್ ರಸ್ತೆ, ನೀರು, ಸಮುದಾಯ ಭವನ ಒದಗಿಸಬೇಕು ಮತ್ತು ಸರಕಾರಿ ಶಾಲೆಗಳನ್ನು ಉಳಿಸಿ ಅಭಿವೃದ್ಧಿಪಡಿಸಬೇಕು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿದ ಮನವಿ ಪತ್ರವನ್ನು ಪ್ರತಿಭಟನಾಕಾರರು ಹೆಚ್ಚುವರಿ ಜಿಲ್ಲಾಧಿಕಾರಿ ಡಾ.ಸಹನಾ ಎಸ್.ಹಾದಿಮನಿ ಅವರ ಮೂಲಕ ರಾಜ್ಯ ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಿಗೆ ಸಲ್ಲಿಸಿದರು.
ಪ್ರತಿಭಟನೆಯ ನೇತೃತ್ವ ವಹಿಸಿ ಮಾತನಾಡಿದ ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ಕೊಡಗು ಜಿಲ್ಲಾಧ್ಯಕ್ಷ ಕೆ.ಮೊಣ್ಣಪ್ಪ, ಅವರು ಕೊಡಗಿನ ಶಾಸಕರು ನಿವೇಶನ ರಹಿತ ಬಡವರ ಪರ ವಿಧಾನಸಭೆಯಲ್ಲಿ ಧ್ವನಿ ಎತ್ತಿಲ್ಲ. ನಿವೇಶನಕ್ಕಾಗಿ ಒತ್ತಾಯಿಸಿ ಜಿಲ್ಲೆಯ ವಿವಿಧೆಡೆ ಪ್ರತಿಭಟನೆಗಳು ನಡೆಯುತ್ತಿದ್ದರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಮತ್ತು ಬಡವರಿಗೆ ಸೂಕ್ತ ರಕ್ಷಣೆ ನೀಡಿಲ್ಲ ಎಂದು ಆರೋಪಿಸಿದರು.
ಕಳೆದ ಅನೇಕ ವರ್ಷಗಳಿಂದ ಎಸ್.ಸಿ, ಎಸ್.ಟಿ ಸಮುದಾಯ, ಅಲ್ಪಸಂಖ್ಯಾತರು ಹಾಗೂ ಕೂಲಿ ಕಾರ್ಮಿಕ ವರ್ಗದ ಬಡ ಮಂದಿ ಸ್ವಂತ ನಿವೇಶನವಿಲ್ಲದೆ ಗುಡಿಸಲುಗಳಲ್ಲಿ ಮತ್ತು ಲೈನ್ ಮನೆಗಳಲ್ಲಿ ಸಂಕಷ್ಟದ ಜೀವನ ಸಾಗಿಸುತ್ತಿದ್ದಾರೆ. ಸ್ವಂತ ನಿವೇಶನಕ್ಕಾಗಿ ಬಡವರು ಎಷ್ಟೇ ಹೋರಾಟ ನಡೆಸುತ್ತಿದ್ದರೂ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಸ್ಪಂದಿಸುತ್ತಿಲ್ಲ. ಬಡವರಿಗೆ ನಿವೇಶನ ಹಂಚಿಕೆ ಮಾಡುವ ಆಸಕ್ತಿ ತೋರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯಾಧ್ಯಕ್ಷ ಮಾರಸಂದ್ರ ಮುನಿಯಪ್ಪ, ವಿರಾಜಪೇಟೆ ಕ್ಷೇತ್ರದ ಮಾಜಿ ಶಾಸಕ ಹೆಚ್.ಡಿ.ಬಸವರಾಜು, ಯುನೈಟೆಡ್ ಕಿಸಾನ್ ಸಭಾದ ರಾಜ್ಯಾಧ್ಯಕ್ಷ ಡಿ.ಎಸ್.ನಿರ್ವಾಣಪ್ಪ ಹಾಗೂ ದಲಿತ ಸಂಘರ್ಷ ಸಮಿತಿಯ ರಾಜ್ಯಾಧ್ಯಕ್ಷ ವೆಂಕಟಗಿರಿಯಯ್ಯ ಅವರುಗಳು ಮಾತನಾಡಿ, ರಾಜ್ಯ ಸರಕಾರ ಬಡವರನ್ನು ಕಡೆಗಣಿಸಿ ಉಳ್ಳವರ ಪರ ಕೆಲಸ ಮಾಡುತ್ತಿದೆ. ಯಾವುದೇ ಸರಕಾರ ಬಂದರೂ ಬಡವರ ನೋವಿಗೆ ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ಬೆಳೆಗಾರರಿಗೆ ಗುತ್ತಿಗೆ ಆಧಾರದಲ್ಲಿ ಒತ್ತುವರಿ ಭೂಮಿಯನ್ನು ನೀಡುವ ನಿಯಮವನ್ನು ರದ್ದು ಮಾಡಬೇಕು ಮತ್ತು ಒತ್ತುವರಿಯನ್ನು ತೆರವುಗೊಳಿಸಿ ಬಡವರಿಗೆ ಹಂಚಿಕೆ ಮಾಡಬೇಕೆಂದು ಒತ್ತಾಯಿಸಿದರು.
ಆಲ್ ಇಂಡಿಯಾ ಬಹುಜನ ಸಮಾಜ ಪಾರ್ಟಿಯ ರಾಜ್ಯ ಸಂಯೋಜಕ ಗೋಪಿನಾಥ್, ಖಜಾಂಚಿ ಆರ್.ಮುನಿಯಪ್ಪ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಎ.ಕುಸುಮಾವತಿ, ಉಪಾಧ್ಯಕ್ಷರುಗಳಾದ ಟಿ.ಜಗದೀಶ್ ಕಿರಣ್, ಎಂ.ಮಾದೇಶ, ಕಾರ್ಯದರ್ಶಿಗಳಾದ ಶಿವಪ್ಪ, ಸುದೀಪ್, ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ಸೇನೆಯ ರಾಜ್ಯಾಧ್ಯಕ್ಷ ಎನ್.ಮೂರ್ತಿ, ಪದಾಧಿಕಾರಿ ಡಿ.ಚಂದ್ರು ಸೇರಿದಂತೆ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಮುಖಂಡರು, ಹೆಚ್ಚಿನ ಸಂಖ್ಯೆಯಲ್ಲಿದ್ದ ನಿವೇಶನ ರಹಿತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.






