Kodagu | ಸೆ.20ರಿಂದ ದುಬಾರೆ ಸಾಕಾನೆ ಶಿಬಿರ ಪುನರಾರಂಭ; ನಿಯಮ ಪಾಲನೆ ಖಡ್ಡಾಯ

ಮಡಿಕೇರಿ: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣವಾಗಿರುವ ದುಬಾರೆ ಸಾಕಾನೆ ಶಿಬಿರವನ್ನು ಸೆ.20ರಿಂದ ಸಾರ್ವಜನಿಕರ ವೀಕ್ಷಣೆಗೆ ಪುನರಾರಂಭಿಸಲಾಗುವುದು ಎಂದು ಅರಣ್ಯ ಇಲಾಖೆ ತಿಳಿಸಿದೆ.
ಕರ್ನಾಟಕ ಸರಕಾರ ಸಾಕಾನೆ ಶಿಬಿರಗಳಿಗಾಗಿ ರೂಪಿಸಿರುವ ಪ್ರಮಾಣಿತ ಕಾರ್ಯಾಚರಣಾ ವಿಧಾನವನ್ನು ಅನುಷ್ಠಾನಗೊಳಿಸಿದ ಬಳಿಕ ಶಿಬಿರವನ್ನು ಪುನರಾರಂಭಿಸಲಾಗುತ್ತಿದೆ. ಆರಂಭಿಕ ಹಂತದಲ್ಲಿ ಬೆಳಿಗ್ಗೆ 9.30ರಿಂದ 11.30ರವರೆಗೆ ಮಾತ್ರ ಶಿಬಿರದ ಚಟುವಟಿಕೆಗಳನ್ನು ನಡೆಸಲಾಗುವುದು. ಪರಿಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಮುಂದಿನ ದಿನಗಳಲ್ಲಿ ಇತರೆ ಅವಧಿಗಳಲ್ಲಿಯೂ ಕಾರ್ಯಾಚರಣೆಯನ್ನು ವಿಸ್ತರಿಸುವ ಕುರಿತು ನಿರ್ಧರಿಸಲಾಗುವುದು ಎಂದು ಅರಣ್ಯ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರವಾಸಿಗರು ಹಾಗೂ ಆನೆಗಳ ನಡುವೆ ಯಾವುದೇ ರೀತಿಯ ನೇರ ಸಂಪರ್ಕಕ್ಕೆ ಅವಕಾಶ ಇರುವುದಿಲ್ಲ. ಪ್ರವಾಸಿಗರು ಆನೆಗಳಿಗೆ ಸ್ನಾನ ಮಾಡಿಸುವುದು ಮತ್ತು ಆಹಾರ ನೀಡುವುದನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ.
ಪ್ರವಾಸಿಗರ ಪ್ರವೇಶವನ್ನು ಸೀಮಿತ ಸಂಖ್ಯೆಯ ಬ್ಯಾಚ್ ಗಳಲ್ಲಿ, ನಿಗದಿತ ಅವಧಿಯಲ್ಲಿ ಆಯೋಜಿಸಲಾಗುತ್ತದೆ. ಪ್ರತಿ ಬ್ಯಾಚ್‍ಗೆ ಸುಮಾರು 45 ನಿಮಿಷಗಳ ಕಾಲಾವಕಾಶ ನೀಡಲಾಗಿದ್ದು, ಬ್ಯಾಚ್ ನಲ್ಲಿ ಗರಿಷ್ಠ 150 ಮಂದಿಗೆ ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ. ಶಿಬಿರದ ವೀಕ್ಷಣೆ ಹಾಗೂ ಮಾಹಿತಿಯನ್ನು ಶಿಬಿರದ ಮಾರ್ಗದರ್ಶಕರ ನೇತೃತ್ವದಲ್ಲಿ ಒದಗಿಸಲಾಗುತ್ತದೆ.
ದುಬಾರೆ ಸಾಕಾನೆ ಶಿಬಿರಕ್ಕೆ ಆಗಮಿಸುವ ಪ್ರವಾಸಿಗರು ಅರಣ್ಯ ಇಲಾಖೆ ಹಾಗೂ ಶಿಬಿರದ ಸಿಬ್ಬಂದಿ ನೀಡುವ ಎಲ್ಲಾ ಸುರಕ್ಷತಾ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಆನೆಗಳ ಕಲ್ಯಾಣ, ಪ್ರವಾಸಿಗರ ಸುರಕ್ಷತೆ ಹಾಗೂ ಶಿಬಿರದ ಪರಿಸರ ಸಂರಕ್ಷಣೆಗೆ ಸಾರ್ವಜನಿಕರ ಸಹಕಾರವನ್ನು ಅರಣ್ಯ ಇಲಾಖೆ ಕೋರಿದೆ.






