Kodagu | ವಿದೇಶಿ ಮಹಿಳೆಗೆ ಲೈಂಗಿಕ ದೌರ್ಜನ್ಯ ಪ್ರಕರಣ: ಕುಟ್ಟ ಗ್ರಾಮದ 'ದೇವಿ ವಿಲ್ಲಾ ಹೋಂ ಸ್ಟೇ ಪರವಾನಿಗೆ ರದ್ದು

ಮಡಿಕೇರಿ, ಎ.23: ವಿದೇಶಿ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎನ್ನಲಾದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಇಲಾಖೆ, ಆರೋಪಿತ ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ಕುಟ್ಟ ಗ್ರಾಮದ ದೇವಿ ವಿಲ್ಲಾ ಹೋಂ ಸ್ಟೇಯ ಪರವಾನಿಗೆಯನ್ನು ರದ್ದುಗೊಳಿಸಿದೆ.
ಜಿಲ್ಲಾ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಯ ಅಧ್ಯಕ್ಷರೂ ಆಗಿರುವ ಕೊಡಗು ಜಿಲ್ಲಾಧಿಕಾರಿ ಸೋಮಶೇಖರ್ ಅವರು ದೇವಿ ವಿಲ್ಲಾ ಹೋಂ ಸ್ಟೇ ನಡೆಸಲು ನೀಡಲಾಗಿದ್ದ ಪರವಾನಿಗೆಯನ್ನು ರದ್ದುಪಡಿಸಿ ಆದೇಶ ಹೊರಡಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ದೇವಿ ವಿಲ್ಲಾ ಹೋಂ ಸ್ಟೇ ಮಾಲಕ ಸೇರಿದಂತೆ ಇಬ್ಬರನ್ನು ಈಗಾಗಲೇ ಪೊಲೀಸರು ಬಂಧಿಸಿದ್ದಾರೆ.
ಕುಟ್ಟ ಗ್ರಾಮದ ಪಿ.ಎ. ಪೊನ್ನಪ್ಪ ಎಂಬವರಿಗೆ ದೇವಿ ಎಲ್ಲಾ ಹೋಂ ಸ್ಟೇ ನಡೆಸಲು 2024ರ ಜನವರಿ 15ರಂದು ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ನೀಡಲಾಗಿತ್ತು. ಕಳೆದ ಎ.12ರಂದು ಈ ಹೋಂ ಸ್ಟೇಯಲ್ಲಿ ಅಮೆರಿಕ ಮೂಲದ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಈ ಬಗ್ಗೆ ತನಿಖೆ ಕೈಗೆತ್ತಿಕೊಂಡಿರುವ ಕುಟ್ಟ ಪೊಲೀಸರು ಹೋಂ ಸ್ಪೇ ಮಾಲಕ ಹಾಗೂ ನೌಕರನನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿ, ಹೋಂ ಸ್ಟೇ ಪರವಾನಿಯನ್ನು ರದ್ದುಗೊಳಿಸುವಂತೆ ಪ್ರವಾಸೋದ್ಯಮ ಅಭಿವೃದ್ಧಿ ಸಮಿತಿಗೆ ಶಿಫಾರಸು ಮಾಡಿದ್ದಾರೆ. ಈ ಹಿನ್ನೆಲೆಯಲ್ಲಿ ಸಮಿತಿಯ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ಸೋಮಶೇಖರ್ ಪರವಾನಿಗೆ ರದ್ದು ಮಾಡಿ ಆದೇಶ ಹೊರಡಿಸಿದ್ದಾರೆ.






