Kodagu | ಕಾಡಾನೆ ದಾಳಿಗೆ ಕಾರ್ಮಿಕ ಬಲಿ

ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ಕಾರ್ಮಿಕರೊಬ್ಬರು ಮೃತಪಟ್ಟಿರುವ ಘಟನೆ ಕೊಡಗು ಜಿಲ್ಲೆಯ ಸಿದ್ದಾಪುರ ಸಮೀಪದ ಗೌರಿಬೆಟ್ಟ ವ್ಯಾಪ್ತಿಯಲ್ಲಿ ನಡೆದಿದೆ.
ಹುಂಡಿ ನಿವಾಸಿ ಲತೀಫ್ (65) ಮೃತಪಟ್ಟವರು. ಬಜೆಗೊಲ್ಲಿ ಬಳಿಯ ತೋಟದಲ್ಲಿ ಕೆಲಸ ಮಾಡುತ್ತಿದ್ದ ಸಂದರ್ಭ ಕಾಡಾನೆ ಏಕಾಏಕಿ ದಾಳಿ ಮಾಡಿದ್ದು, ತೀವ್ರವಾಗಿ ಗಾಯಗೊಂಡ ಲತೀಫ್ ಅವರು ಮೃತಪಟ್ಟಿದ್ದಾರೆ. ಮೃತರು ಪತ್ನಿ ಹಾಗೂ ಮೂವರು ಮಕ್ಕಳನ್ನು ಅಗಲಿದ್ದಾರೆ.
ಗ್ರಾಮಸ್ಥರ ಅಸಮಾಧಾನ:
ಕಾಡಾನೆ ಉಪಟಳದಿಂದ ಆತಂಕಗೊಂಡಿರುವ ಗ್ರಾಮಸ್ಥರು ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಈ ಘಟನೆಗೆ ಕಾರಣವೆಂದು ಆರೋಪಿಸಿದರು.
ಇತ್ತೀಚೆಗೆ ಒಂಟಿ ಸಲಗವೊಂದು ನಡು ರಸ್ತೆಯಲ್ಲೇ ಶಾಲಾ ವಾಹನದ ಮೇಲೆ ದಾಳಿ ಮಾಡಲು ಪ್ರಯತ್ನಸಿದೆ. ತಕ್ಷಣ ಅರಣ್ಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಂಡಿದ್ದರೆ ಈ ಅನಾಹುತ ಸಂಭವಿಸುತ್ತಿರಲಿಲ್ಲವೆಂದು ಅಸಮಾಧಾನ ವ್ಯಕ್ತಪಡಿಸಿದರು.
ಕಾಡಾನೆಗಳ ಉಪಟಳ ತಡೆಗೆ ಶಾಶ್ವತ ಪರಿಹಾರ ಘೋಷಿಸಬೇಕೆಂದು ಒತ್ತಾಯಿಸಿದರು.
ಸ್ಥಳಕ್ಕೆ ಭೇಟಿ ನೀಡಿದ ಅರಣ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಮೃತರ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವುದಾಗಿ ಭರವಸೆ ನೀಡಿದರು.





