Kodagu | ಕಾಡಾನೆ ದಾಳಿಗೆ ಪ್ರವಾಸಿ ಸಾವು

ಸಾಂದರ್ಭಿಕ ಚಿತ್ರ | PC : AI
ಮಡಿಕೇರಿ : ವಾಯು ವಿಹಾರಕ್ಕೆ ತೆರಳಿದ್ದ ಪ್ರವಾಸಿಗ ಕಾಡಾನೆ ದಾಳಿಯಿಂದ ಮೃತಪಟ್ಟ ಘಟನೆ ಶನಿವಾರ ಸಂಜೆ ಶ್ರೀಮಂಗಲ ಸಮೀಪದ ತೆರಾಲು ಗ್ರಾಮದಲ್ಲಿ ನಡೆದಿದೆ.
ರಜೆ ಹಿನ್ನೆಲೆಯಲ್ಲಿ ಬೆಂಗಳೂರು ಆರ್.ಆರ್. ನಗರ ನಿವಾಸಿ ಮುರಳೀಕೃಷ್ಣ(41) ಮತ್ತು ಅವರ ಸ್ನೇಹಿತರು ಪೊನ್ನಂಪೇಟೆ ತಾಲೂಕಿನ ಶ್ರೀಮಂಗಲ ಹೋಬಳಿಯ ತೆರಾಲು ಗ್ರಾಮದ ಹೋಂ ಸ್ಟೇ ಒಂದಕ್ಕೆ ಆಗಮಿಸಿದ್ದರು.
ಸಂಜೆ 5.30ರ ವೇಳೆ ಏಕಾಂಗಿಯಾಗಿ ರಸ್ತೆಯಲ್ಲಿ ವಾಯು ವಿಹಾರಕ್ಕೆ ತೆರಳುತ್ತಿದ್ದ ಸಂದರ್ಭ ಕಾಡಾನೆ ನಾಯಿ ಒಂದನ್ನು ಅಟ್ಟಿಸಿಕೊಂಡು ಬಂದು ಏಕಾಏಕಿ ಪ್ರವಾಸಕ್ಕೆ ಬಂದಿದ್ದ ಮುರಳೀಕೃಷ್ಣ ಅವರ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಹೊಟ್ಟೆಯ ಭಾಗಕ್ಕೆ ಕಾಡಾನೆ ಕಾಲಿನಿಂದ ತುಳಿದಿದ್ದು ಗಂಭೀರ ಗಾಯಗೊಂಡಿದ್ದ ಅವರನ್ನು ಕೂಡಲೇ ಸ್ಥಳೀಯರು ಸಮೀಪದ ಆಸ್ಪತ್ರೆಗೆ ದಾಖಲಿಸಲು ಕರೆ ತರುವ ಸಂದರ್ಭ ಮಾರ್ಗ ಮಧ್ಯೆ ಮುರಳೀಕೃಷ್ಣ ಮೃತಪಟ್ಟಿದ್ದಾರೆ.
ಘಟನಾ ಸ್ಥಳಕ್ಕೆ ಅರಣ್ಯ ಇಲಾಖೆ ಡಿಆರ್ ಎಫ್ಒ ಗಣೇಶ್, ಶ್ರೀಮಂಗಲ ಠಾಣಾಧಿಕಾರಿ ಸುರೇಂದ್ರ ಮತ್ತು ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಈ ಘಟನೆ ಕುರಿತು ಶ್ರೀಮಂಗಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಗೋಣಿಕೊಪ್ಪ ಸಮುದಾಯ ಆರೋಗ್ಯ ಕೇಂದ್ರದ ಶವಾಗಾರಕ್ಕೆ ಸ್ಥಳಾಂತರಿಸಲಾಗಿದೆ. ಕಾಡಾನೆ ದಾಳಿಯಿಂದ ಪ್ರವಾಸಿಗ ಸಾವನ್ನಪ್ಪಿದ ಘಟನೆಗೆ ಸ್ಥಳೀಯರು ಅರಣ್ಯ ಇಲಾಖೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದ್ದಾರೆ.




