ಮಡಿಕೇರಿ: ಮಹಿಳೆಯ ಹತ್ಯೆಗೈದು ಚಿನ್ನಾಭರಣ ದೋಚಿದ ಪ್ರಕರಣ; ಆರೋಪಿಗೆ ಜೀವಾವಧಿ ಶಿಕ್ಷೆ

ಆರೋಪಿ ಅನಿಲ್
ಮಡಿಕೇರಿ: ಮಡಿಕೇರಿ ತಾಲ್ಲೂಕಿನ ಕೆ.ನಿಡುಗಣೆ ಗ್ರಾಮದ ರೆಸಾರ್ಟ್ವೊಂದರ ಹಿಂಭಾಗದಲ್ಲಿ ವಾಸವಿದ್ದ ಲಲಿತಾ.ಬಿ.ಪಿ (70) ಎಂಬವರನ್ನು 2021 ಫೆ.22 ರಂದು ಕೊಲೆ ಮಾಡಿ ನಗದು ಮತ್ತು ಚಿನ್ನಾಭರಣ ದೋಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪ ಸಾಬೀತಾದ ಹಿನ್ನೆಲೆ ಮೂಡುಬಿದ್ರೆಯ ನಿವಾಸಿ ಅನಿಲ್ ಗೆ ಮಡಿಕೇರಿಯ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.
ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆಯನ್ನು ನಡೆಸಿ ಇಂದು ಪ್ರಕರಣದ ಆರೋಪಿಯಾದ ಅನಿಲ್ (35) ಗೆ ಕೊಲೆ ಮಾಡಿರುವ ಅಪರಾಧಕ್ಕಾಗಿ ಜೀವಾವಧಿ ಜೈಲು ಶಿಕ್ಷೆ ಹಾಗೂ ರೂ.45 ಸಾವಿರ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಪಾವತಿಸದಿದ್ದಲ್ಲಿ ಒಂದು ವರ್ಷ ಜೈಲು ಶಿಕ್ಷೆಯನ್ನು ವಿಧಿಸಿ ನ್ಯಾಯಾಲಯದ ನ್ಯಾಯಾಧೀಶರಾದ ಜಿ.ಪ್ರಶಾಂತಿ ಅವರು ತೀರ್ಪು ನೀಡಿದ್ದಾರೆ ಎಂದು ಪೊಲೀಸ್ ಪ್ರಕಟಣೆ ತಿಳಿಸಿದೆ.
ಲಲಿತಾ.ಬಿ.ಪಿ ಅವರು 2021 ಫೆ.22 ರಂದು ಮನೆಯಲ್ಲಿ ಒಬ್ಬರೇ ಇದ್ದ ಸಂದರ್ಭ ತಲೆಗೆ ಹೊಡೆದು ಕೊಲೆ ಮಾಡಿ ಮನೆಯಲ್ಲಿದ್ದ ಚಿನ್ನಾಭರಣಗಳು ಮತ್ತು ನಗದನ್ನು ಕಳವು ಮಾಡಿರುವ ಬಗ್ಗೆ ದೂರು ಸ್ವೀಕರಿಸಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿತ್ತು. ಪಕ್ಕದ ರೆಸಾರ್ಟ್ನಲ್ಲಿ ಕೆಲಸ ಮಾಡುತಿದ್ದ ಮೂಡುಬಿದ್ರೆ ನಿವಾಸಿಯಾದ ಆರೋಪಿ ಅನಿಲ್ ನನ್ನು 2021 ಮಾ.22ರಂದು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಪ್ರಕರಣದ ತನಿಖಾಧಿಕಾರಿಯಾದ ಮಡಿಕೇರಿ ಗ್ರಾಮಾಂತರ ಠಾಣೆಯ ಪಿಐ ರವಿಕಿರಣ್, ಎಎಸ್ಐ ಮಂಜುನಾಥ.ಎಂ.ಎನ್ ಹಾಗೂ ಸಿಬ್ಬಂದಿಗಳು ಪ್ರಕರಣದ ತನಿಖೆಯನ್ನು ಕೈಗೊಂಡು ಆರೋಪಿ ಅನಿಲ ವಿರುದ್ಧ ದೋಷಾರೋಪಣ ಪತ್ರವನ್ನು 2021 ಮೇ 29 ರಂದು ಮಡಿಕೇರಿಯ 1 ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.
ಸರ್ಕಾರಿ ಅಭಿಯೋಜಕರಾದ ದೇವೇಂದ್ರ.ಎನ್.ಪಿ ಆರೋಪಿಯ ವಿರುದ್ಧ ನ್ಯಾಯಾಲಯದಲ್ಲಿ ವಾದ ಮಂಡಿಸಿದರು.







