ಮಡಿಕೇರಿ | ಹಾಡಹಗಲೇ ಚಿನ್ನಾಭರಣ ಕಸಿದು ಪರಾರಿ : ಆರೋಪಿಯನ್ನು ಪೊಲೀಸರಿಗೆ ಒಪ್ಪಿಸಿದ ಗ್ರಾಮಸ್ಥರು

ಮಡಿಕೇರಿ : ಹಾಡಹಗಲೇ ಮಹಿಳೆಯರ ಮೇಲೆ ಹಲ್ಲೆ ಮಾಡಿ ಚಿನ್ನಾಭರಣ ಕಸಿದು ಪರಾರಿಯಾದ ಆರೋಪಿಯನ್ನು ಗ್ರಾಮಸ್ಥರೇ ಪೊಲೀಸರಿಗೆ ಒಪ್ಪಿಸಿದ ಪ್ರಕರಣ ಮಡಿಕೇರಿ ತಾಲ್ಲೂಕಿನ ಕೊಂಡಂಗೇರಿ ಗ್ರಾಮದಲ್ಲಿ ನಡೆದಿವುದು ವರದಿಯಾಗಿದೆ.
ಪಾಲಿಬೆಟ್ಟ ಗ್ರಾಮದ ಮುನ್ನಾವರ್ ಎಂಬ ಆರೋಪಿ, ನೀರು ಕೇಳುವ ನೆಪದಲ್ಲಿ ಕೊಂಡಂಗೇರಿಯ ಸಾರಮ್ಮ ಹಾಗೂ ಸಫಾನ ಅವರ ಮನೆಗೆ ಬಂದು ಹಲ್ಲೆ ನಡೆಸಿ ಚಿನ್ನದ ಸರ ಅಪಹರಣ ಮಾಡಿ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಸುದ್ದಿ ತಿಳಿದ ತಕ್ಷಣ ಎಚ್ಚೆತ್ತುಕೊಂಡ ಗ್ರಾಮಸ್ಥರು ಆರೋಪಿಯನ್ನು ಹುಡುಕಿ ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.
ಗಂಭೀರವಾಗಿ ಗಾಯಗೊಂಡಿರುವ ಇಬ್ಬರು ಮಹಿಳೆಯರು ಹಾಗೂ ಆರೋಪಿ ಮುನ್ನಾವರ್ ನನ್ನು ಮಡಿಕೇರಿಯ ಜಿಲ್ಲಾ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಸಿದ್ದಾಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಎಚ್ಚರಿಕೆಯಿಂದ ಇರಬೇಕು :
ಜಿಲ್ಲಾಸ್ಪತ್ರೆಗೆ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಅವರು ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದರು. ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಪರಿಚಿತರು ಕಂಡು ಬಂದಾಗ ಎಚ್ಚರಿಕೆಯಿಂದ ಇರಬೇಕು, ಪೊಲೀಸ್ ಸಹಾಯವಾಣಿ 112 ಗೆ ಕರೆ ಮಾಡಬೇಕು ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡುವಂತೆ ಮನವಿ ಮಾಡಿದರು.







