ಮಡಿಕೇರಿ: ಕೆರೆಗೆ ಬಿದ್ದು ತಾಯಿ, ಮಗಳು ಮೃತ್ಯು

ಮಡಿಕೇರಿ : ಕ್ಷುಲ್ಲಕ ಕಾರಣಕ್ಕೆ ಜಗಳವಾಡಿದ ತಾಯಿ ಹಾಗೂ ಮಗಳು ಕೆರೆಗೆ ಬಿದ್ದು ಮೃತಪಟ್ಟಿರುವ ಘಟನೆ ಭಾಗಮಂಡಲ ಸಮೀಪದ ತಣ್ಣಿಮಾನಿ ಗ್ರಾಮದ ಕೆಂಪುರಾಶಿ ಮೊಟ್ಟೆಯಲ್ಲಿ ನಡೆದಿರುವುದು ವರದಿಯಾಗಿದೆ.
ಮಂಜು ಎಂಬವರ ಪತ್ನಿ ಪ್ರೇಮಾ(36) ಹಾಗೂ ಮಗಳು ಪ್ರಿಯಾಂಕಾ(14) ಮೃತಪಟ್ಟವರು ಎಂದು ತಿಳಿದು ಬಂದಿದೆ.
ಮನೆಯಲ್ಲಿ ತಾಯಿ ಹಾಗೂ ಮಗಳ ನಡುವೆ ಕ್ಷುಲ್ಲಕ ವಿಚಾರಕ್ಕೆ ಆ.31ರ ಸಂಜೆ ಜಗಳ ನಡೆದಿದೆ ಎನ್ನಲಾಗಿದೆ. ಮಗಳು ಪ್ರಿಯಾಂಕಾ ತಾನು ಕೆರೆಗೆ ಹಾರುವುದಾಗಿ ಹೇಳಿ ಮನೆಯಿಂದ ಓಡಿ ಹೋಗಿದ್ದಾಳೆ. ಮಗಳು ಕೆರೆಯತ್ತ ಹೋಗುವುದನ್ನು ಕಂಡ ತಾಯಿ ಪ್ರೇಮಾ ಕೂಡ ಆತಂಕಗೊಂಡು ಆಕೆಯ ಹಿಂದೆ ಓಡಿದ್ದಾರೆ. ಈ ವೇಳೆ ಪ್ರಿಯಾಂಕಾ ಕೆರೆಗೆ ಹಾರಿದ್ದು ಮಗಳನ್ನು ರಕ್ಷಿಸುವ ಉದ್ದೇಶದಿಂದ ತಾಯಿ ಪ್ರೇಮಾ ಕೂಡ ಕೆರೆಗೆ ಹಾರಿದ್ದಾರೆ ಎಂದು ಹೇಳಲಾಗಿದೆ. ಈ ಘಟನೆಯನ್ನು ದೂರದಿಂದ ಕಂಡ ಸ್ಥಳೀಯರು ಇಬ್ಬರನ್ನು ರಕ್ಷಿಸುವ ಪ್ರಯತ್ನ ಮಾಡಿದರಾದರೂ ಯಾವುದೇ ಪ್ರಯೋಜನವಾಗಲಿಲ್ಲ.
ಘಟನಾ ಸ್ಥಳಕ್ಕೆ ಅಗ್ನಿ ಶಾಮಕ ಸಿಬ್ಬಂದಿ ಹಾಗೂ ಭಾಗಮಂಡಲ ಪೊಲೀಸರು ಭೇಟಿ ನೀಡಿ ಮಂಗಳವಾರ ಬೆಳಗ್ಗೆ ತಾಯಿ,ಮಗಳ ಮೃತದೇಹಗಳನ್ನು ಕೆರೆಯಿಂದ ಹೊರ ತೆಗೆಯುವಲ್ಲಿ ಯಶಸ್ವಿಯಾದರು. ಘಟನೆಗೆ ಸಂಬಂಧಿಸಿದಂತೆ ಭಾಗಮಂಡಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




