ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಆಗ್ರಹಿಸಿ ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ

ಮಡಿಕೇರಿ : ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ(ಎಸ್‍ಐಆರ್) ವ್ಯವಸ್ಥೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಹದಗೆಡಿಸುತ್ತಿದೆ ಎಂದು ಆರೋಪಿಸಿ ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಿ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿ ಮಡಿಕೇರಿಯಲ್ಲಿ ಪ್ರತಿಭಟನೆ ನಡೆಸಿತು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಗಳಿಂದ ಆಗಮಿಸಿದ್ದ ಕಾಂಗ್ರೆಸ್ ಪ್ರಮುಖರು ಹಾಗೂ ಕಾರ್ಯಕರ್ತರು ನಗರದ ಇಂದಿರಾಗಾಂಧಿ ವೃತ್ತದಲ್ಲಿ ಪ್ರತಿಭಟನೆ ನಡೆಸಿ ಜ್ಞಾನೇಶ್ ಕುಮಾರ್ ಹಾಗೂ "ವಿಶ್ವ ಗುರು"ವಿನ ಹೆಸರಿನ ಪ್ರತಿಕೃತಿಗಳನ್ನು ದಹಿಸಿದರು.
ಕಾಂಗ್ರೆಸ್ ಅಧ್ಯಕ್ಷ ತೀತಿರ ಧರ್ಮಜ ಉತ್ತಪ್ಪ ಅವರು ಮಾತನಾಡಿ, ಚುನಾವಣಾ ಆಯೋಗವು ಎಸ್‍ಐಆರ್ ಪ್ರಕ್ರಿಯೆಯನ್ನು ವ್ಯವಸ್ಥಿತವಾಗಿ ನಡೆಸದೆ, ಅರ್ಹ ಮತದಾರರನ್ನು ಮತದಾನದಿಂದ ವಂಚಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ವಿರುದ್ಧವಾಗಿ ನಡೆದುಕೊಂಡಿದೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ನಿಲುವುಗಳಿಂದ ಸಾಕಷ್ಟು ಗೊಂದಲಗಳು ನಿರ್ಮಾಣವಾಗಿದೆ ಎಂದು ಆರೋಪಿಸಿದರು.
ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಜನಪರವಾದ ಹತ್ತಾರು ವಿಚಾರಗಳನ್ನು ಲೋಕಸಭೆಯಲ್ಲಿ ಪ್ರಸ್ತಾಪಿಸಿದರೂ ಅದಕ್ಕೆ ಸಮರ್ಪಕವಾದ ಉತ್ತರವನ್ನು ಕೇಂದ್ರ ನೀಡುತ್ತಿಲ್ಲ. ಪ್ರಸ್ತುತ ಎಸ್‍ಐಆರ್ ಗೆ ಸಂಬಂಧಿಸಿದ ಗೊಂದಲಗಳಿಗೆ ಪ್ರಧಾನಮಂತ್ರಿ ಹಾಗೂ ಗೃಹ ಸಚಿವರೇ ಕಾರಣರಾಗಿದ್ದು, ಅವರು ತಕ್ಷಣ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿದರು.
ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಹಾಗೂ "ವಿಶ್ವ ಗುರು" ಹೆಸರಿನ ಪ್ರತಿಕೃತಿ ದಹಿಸಿದ ಪ್ರತಿಭಟನಾಕಾರರು ಘೋಷಣೆಗಳನ್ನು ಕೂಗಿದರು. ಅಷ್ಟರಲ್ಲೆ ಪೊಲೀಸರು ಪ್ರತಿಕೃತಿಯನ್ನು ಎಳೆದು ಬೆಂಕಿಯನ್ನು ನಂದಿಸಿದರು.
ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷ ಟಿ.ಪಿ.ರಮೇಶ್, ಪ್ರಮುಖರಾದ ನೆರವಂಡ ಉಮೇಶ್, ಕೆ.ಯು.ಅಬ್ದುಲ್ ರಜಾಕ್, ಅಬ್ದುಲ್ ಲತೀಫ್, ಮಂದ್ರೀರ ಮೋಹನ ದಾಸ್, ಕೊಲ್ಯದ ಗಿರೀಶ್, ಕೆ.ಜಿ.ಪೀಟರ್, ಅಪ್ರು ರವೀಂದ್ರ, ನಾಪಂಡ ಮುತ್ತಪ್ಪ, ತೆನ್ನಿರ ಮೈನ, ಜುಲೇಕಾಬಿ, ಶ್ರೀಮತಿ ಬಂಗೇರ, ಫ್ಯಾನ್ಸಿ ಮುತ್ತಣ್ಣ, ಲೀಲಾ ಶೇಷಮ್ಮ, ಸುಜು ತಿಮ್ಮಯ್ಯ, ಮೋಹನ್ ಮೌರ್ಯ, ಟಿ.ಆರ್.ಅರ್ಜುನ್, ಹನೀಫ್ ಸಂಪಾಜೆ, ಪ್ರಭು ರೈ, ಪುಷ್ಪಾ ಪೂಣಚ್ಚ, ಪ್ರಕಾಶ್ ಆಚಾರ್ಯ, ಪಟ್ಟಡ ರಂಜಿ ಪೂಣಚ್ಚ, ಸುಜು ತಿಮ್ಮಯ್ಯ, ಮಂಜುನಾಥ್ ಪಕ್ಷದ ವಿವಿಧ ಘಟಕಗಳ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.






