ಮಡಿಕೇರಿ | ಓಮ್ನಿಗೆ ಬಸ್ ಢಿಕ್ಕಿ : ನಾಲ್ವರಿಗೆ ಗಂಭೀರ ಗಾಯ

ಮಡಿಕೇರಿ, ಸೆ.25: ಮೈಸೂರಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಬ್ರೇಕ್ ವಿಫಲಗೊಂಡ ಪರಿಣಾಮ ನಿಯಂತ್ರಣ ತಪ್ಪಿ, ಎದುರು ಬರುತ್ತಿದ್ದ ಓಮ್ನಿ ವಾಹನಕ್ಕೆ ಡಿಕ್ಕಿಯಾಗಿ ಪಲ್ಟಿಯಾದ ಘಟನೆ ಬುಧವಾರ ರಾತ್ರಿ ಮಡಿಕೇರಿ ಸಮೀಪ ತಾಳತ್ಮನೆ ತಿರುವಿನಲ್ಲಿ ನಡೆದಿದೆ.
ಅಪಘಾತದಲ್ಲಿ ಓಮ್ನಿಯಲ್ಲಿದ್ದ ನಾಲ್ವರಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ತಕ್ಷಣವೇ ಮಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಗಾಯಾಳುಗಳು ಮಂಗಳೂರು ಮೂಲದವರಾಗಿದ್ದು, ದಸರಾ ವ್ಯಾಪಾರಕ್ಕಾಗಿ ಮಡಿಕೇರಿಗೆ ಬಂದಿದ್ದರು ಎಂದು ತಿಳಿದುಬಂದಿದೆ.
ಅದೃಷ್ಟವಶಾತ್ ಬಸ್‌ನಲ್ಲಿದ್ದ 17 ಕ್ಕೂ ಹೆಚ್ಚು ಪ್ರಯಾಣಿಕರು ಹಾಗೂ ಚಾಲಕ ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ. ಅಪಘಾತದಿಂದ ಓಮ್ನಿ ವಾಹನ ಸಂಪೂರ್ಣ ಜಖಂಗೊಂಡಿದ್ದು, ಪಲ್ಟಿಯಾದ ಬಸ್ ಅನ್ನು ಕ್ರೇನ್ ಮೂಲಕ ಮೇಲೆತ್ತಲಾಗಿದೆ.
ಮಡಿಕೇರಿ ಪೊಲೀಸರು ಸ್ಥಳಕ್ಕೆ ಧಾವಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story





