Madikeri | ಆರೆಸ್ಸೆಸ್ 100ರ ಸಂಭ್ರಮದಲ್ಲಿ ಹೆಜ್ಜೆ ಹಾಕಿದ ಕಾಂಗ್ರೆಸ್ ಶಾಸಕ ಮಂತರ್ ಗೌಡ; ಚರ್ಚೆಗೆ ಗ್ರಾಸ

ಮಡಿಕೇರಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘ (RSS) 100 ವರ್ಷಗಳನ್ನು ಪೂರೈಸಿದ ಹಿನ್ನೆಲೆ ಕುಶಾಲನಗರದಲ್ಲಿ ಜ.25 ರಂದು ನಡೆದ ‘ಹಿಂದೂ ಸಂಗಮ’ ಕಾರ್ಯಕ್ರಮದ ಶೋಭಾಯಾತ್ರೆಯಲ್ಲಿ ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಶಾಸಕ ಡಾ.ಮಂತರ್ ಗೌಡ ಪಾಲ್ಗೊಂಡಿದ್ದು, ಇದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದ್ದಾರೆ.
ಹಿಂದೂ ಸಂಗಮ ಆಯೋಜನಾ ಸಮಿತಿ ವತಿಯಿಂದ RSS ಸೇರಿದಂತೆ ವಿವಿಧ ಹಿಂದೂ ಸಂಘಟನೆಗಳ ಸಹಯೋಗದೊಂದಿಗೆ ಕುಶಾಲನಗರದಲ್ಲಿ ‘ಹಿಂದೂ ಸಂಗಮ’ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇದರ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ಶೋಭಾಯಾತ್ರೆ ತಾವರೆಕರೆ ಬಳಿಯಿಂದ ಆರಂಭಗೊಂಡು ಬೈಚನಹಳ್ಳಿ ಸಮೀಪಿಸುತ್ತಿದ್ದಂತೆ ಅಲ್ಲಿಗೆ ಬಂದ ಶಾಸಕ ಡಾ.ಮಂತರ್ ಗೌಡ ಅವರು ಅಚ್ಚರಿ ಮೂಡಿಸಿದರು.
‘ಹಿಂದೂ ಸಂಗಮ’ ಕಾರ್ಯಕ್ರಮದ ಸಂಯೋಜಕ ಹಾಗೂ ಆರೆಸ್ಸೆಸ್ ನ ಹಿರಿಯ ಕಾರ್ಯಕರ್ತ ಜಿ.ಎಲ್.ನಾಗರಾಜ್ ಅವರ ಆಶೀರ್ವಾದ ಪಡೆದ ಶಾಸಕರು, ಸ್ಥಳದಲ್ಲಿದ್ದ ಮಾಜಿ ಶಾಸಕ ಬಿಜೆಪಿಯ ಎಂ.ಪಿ.ಅಪ್ಪಚ್ಚುರಂಜನ್ ಅವರಿಗೆ ಹಸ್ತಲಾಘವ ಮಾಡಿ ಮಾತನಾಡಿದರು. ಈ ಸಂದರ್ಭ ಮೆರವಣಿಗೆಯಲ್ಲಿದ್ದ ಸಂಘಟನೆಯ ಪ್ರಮುಖರು ಡಾ.ಮಂತರ್ ಗೌಡ ಅವರಿಗೆ ಕೇಸರಿ ಶಾಲು ತೊಡಿಸಿದರು. ಇದಾದ ನಂತರ ಸ್ವಲ್ಪ ದೂರ ಶೋಭಾಯಾತ್ರೆಯಲ್ಲಿ ಸಾಗಿದ ಶಾಸಕರು ನೆರೆದಿದ್ದವರಿಗೆ ಶುಭಕೋರಿ ತೆರಳಿದರು.
‘ಹಿಂದೂ ಸಂಗಮ’ದ ಶೋಭಾಯಾತ್ರೆಯಲ್ಲಿ ಕಾಂಗ್ರೆಸ್ ಶಾಸಕ ಡಾ.ಮಂತರ್ ಗೌಡ ಅವರು ಪಾಲ್ಗೊಂಡ ವೀಡಿಯೋ ವೈರಲ್ ಆಗಿದ್ದು, ಇದೀಗ ಚರ್ಚೆಗೆ ಕಾರಣವಾಗಿದೆ.
ಆದರೆ ಶಾಸಕ ಡಾ.ಮಂತರ್ ಗೌಡ ಅವರ ನಡೆಯನ್ನು ಹಿಂದುತ್ವ ಸಂಘಟನೆಗಳ ಕಾರ್ಯಕರ್ತರು ಸ್ವಾಗತಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.
ಡಾ.ಮಂತರ್ ಗೌಡ ಹಾಗೂ ಜೆಡಿಎಸ್ ಶಾಸಕ ಎ.ಮಂಜು ಅವರನ್ನು ಇತ್ತೀಚೆಗೆ ಬಿಜೆಪಿಯ ಮೈತ್ರಿ ಪಕ್ಷ ಜೆಡಿಎಸ್ ನ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಭೇಟಿಯಾಗಿ ಅಚ್ಚರಿ ಮೂಡಿಸಿದ್ದರು. ಇದೀಗ ಡಾ.ಮಂತರ್ ಗೌಡ ಅವರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿರುವುದರಿಂದ ರಾಜಕೀಯ ವಲಯದಲ್ಲಿ ಹಲವು ಲೆಕ್ಕಾಚಾರಗಳು ಆರಂಭಗೊಂಡಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಕೊಡಗು ಜಿಲ್ಲಾ ಕಾಂಗ್ರೆಸ್ ಸಮಿತಿಯ ಅಧ್ಯಕ್ಷ ಧರ್ಮಜ ಉತ್ತಪ್ಪ ಅವರು, "ಶಾಸಕರು ಶೋಭಾಯಾತ್ರೆಯಲ್ಲಿ ಪಾಲ್ಗೊಂಡಿರುವುದು ಸಾಮಾಜಿಕ ಜಾಲತಾಣದ ಮೂಲಕ ನನ್ನ ಗಮನಕ್ಕೆ ಬಂದಿದೆ. ಕೆಪಿಸಿಸಿಯಿಂದ ನನಗೆ ಯಾವುದೇ ಸೂಚನೆ ಬಂದಿಲ್ಲ, ಆದರೆ ಕಾರ್ಯಕರ್ತರು ಪ್ರಶ್ನಿಸುತ್ತಿದ್ದಾರೆ. ಸ್ಪಷ್ಟೀಕರಣ ನೀಡುವಂತೆ ಶಾಸಕರಿಗೆ ಮೌಖಿಕವಾಗಿ ತಿಳಿಸಿದ್ದೇನೆ, ಆದರೆ ಇಲ್ಲಿಯವರೆಗೆ ಯಾವುದೇ ಉತ್ತರ ಬಂದಿಲ್ಲ. ಜ.28 ರಂದು ಪತ್ರ ನೀಡಿ ಸ್ಪಷ್ಟೀಕರಣ ಬಯಸುತ್ತೇನೆ, ಉತ್ತರದ ನಿರೀಕ್ಷೆಯಲ್ಲಿದ್ದೇನೆ" ಎಂದು ಹೇಳಿದ್ದಾರೆ.







