Madikeri | ಬಾಲಕಿಯ ಭೀಕರ ಹತ್ಯೆ ಪ್ರಕರಣ : ಅಪರಾಧಿಗೆ ಮರಣ ದಂಡನೆ ವಿಧಿಸಿದ ನ್ಯಾಯಾಲಯ
16.5 ಲಕ್ಷ ರೂ. ಪರಿಹಾರ ನೀಡಲು ಸರಕಾರಕ್ಕೆ ಸೂಚನೆ

ಓಂಕಾರಪ್ಪ
ಮಡಿಕೇರಿ : ಅಪ್ರಾಪ್ತ ವಯಸ್ಸಿನ ಬಾಲಕಿಯ ಕುತ್ತಿಗೆಯನ್ನು ಕತ್ತಿಯಿಂದ ಕಡಿದು ತುಂಡರಿಸಿ ಅತ್ಯಂತ ಬರ್ಬರವಾಗಿ ಹತ್ಯೆ ಮಾಡಿದ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಮಡಿಕೇರಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ ಅಪರಾಧಿಗೆ ‘ಮರಣ ದಂಡನೆ’ ಶಿಕ್ಷೆ ವಿಧಿಸಿ ಆದೇಶಿಸಿದೆ. ನೊಂದ ಬಾಲಕಿ ಕುಟುಂಬಕ್ಕೆ ಸರಕಾರ 16.5 ಲಕ್ಷ ರೂ. ಪರಿಹಾರ ನೀಡಬೇಕು ಮತ್ತು ಅಪರಾಧಿಗೆ 81 ಸಾವಿರ ರೂ. ದಂಡ ವಿಧಿಸಿ ತೀರ್ಪು ಪ್ರಕಟಿಸಿದೆ.
ಸೋಮವಾರಪೇಟೆ ತಾಲೂಕು ಹಮ್ಮಿಯಾಲ ಗ್ರಾಮದ ನಿವಾಸಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್(36) ಶಿಕ್ಷೆಗೆ ಒಳಗಾದ ಅಪರಾಧಿ. ಕುಂಬಾರಗಡಿಗೆ ನಿವಾಸಿ 16 ವರ್ಷದ ಬಾಲಕಿ ಬರ್ಬರವಾಗಿ ಹತ್ಯೆಯಾಗಿದ್ದಳು.
ಪ್ರಕರಣ ಹಿನ್ನೆಲೆ :
ಸೋಮವಾರಪೇಟೆ ತಾಲೂಕಿನ ಕುಂಬಾರಗಡಿಗೆ ನಿವಾಸಿ ಸಂತ್ರಸ್ತೆ ಸೂರ್ಲಬ್ಬಿ ಗ್ರಾಮದ ಸರಕಾರಿ ಶಾಲೆಯ ಏಕೈಕ ಎಸೆಸೆಲ್ಸಿ ತರಗತಿಯ ವಿದ್ಯಾರ್ಥಿನಿಯಾಗಿದ್ದಳು. 2024ರ ಮೇ 9ರಂದು ಪ್ರಕಟವಾದ ಎಸೆಸೆಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ಬಾಲಕಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಳು. ಪೂರ್ವ ನಿಗದಿಯಂತೆ ಅದೇ ದಿನ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಮತ್ತು ಸಂತ್ರಸ್ತೆ ಮದುವೆಯ ನಿಶ್ಚಿತಾರ್ಥ ಕೂಡ ಬಾಲಕಿ ಮನೆಯಲ್ಲಿ ನಡೆದಿತ್ತು.
ಈ ಕುರಿತು ಗ್ರಾಮಸ್ಥರಿಂದ ಮಾಹಿತಿ ಸ್ವೀಕರಿಸಿದ ಮಕ್ಕಳ ಹಕ್ಕುಗಳ ರಕ್ಷಣಾ ಘಟಕ, ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳು ಕುಂಬಾರಗಡಿಗೆ ಗ್ರಾಮಕ್ಕೆ ಧಾವಿಸಿ ಎರಡೂ ಕುಟುಂಬಗಳೊಂದಿಗೆ ಸಮಾಲೋಚನೆ ನಡೆಸಿದ್ದರು. ಯಾವುದೇ ಕಾರಣಕ್ಕೂ ಬಾಲಕಿಗೆ 18 ವರ್ಷ ಪೂರ್ಣಗೊಳ್ಳದೇ ಮದುವೆ ಮಾಡುವಂತಿಲ್ಲ ಎಂದು ಕಾನೂನಿನ ಅರಿವು ಮೂಡಿಸಿದ್ದರು. ಮಾತ್ರವಲ್ಲದೇ ಎರಡೂ ಕುಟುಂಬಗಳು ಮದುವೆ ಮಾಡದಂತೆ ಮುಚ್ಚಳಿಕೆ ಬರೆಸಿಕೊಂಡಿದ್ದರು. ಆ ಬಳಿಕ ಯುವಕನ ಕುಟುಂಬ ಹಮ್ಮಿಯಾಲದ ತಮ್ಮ ಮನೆಗೆ ತೆರಳಿತ್ತು.
ಬರ್ಬರ ಕೊಲೆ :
2024ರ ಮೇ 9ರ ಸಂಜೆ 5 ಗಂಟೆಯ ಸಮಯದಲ್ಲಿ ಮದುವೆ ಮುಂದೂಡಿಕೆಯಾದ ಕಾರಣಕ್ಕೆ ಆಕ್ರೋಶಗೊಂಡಿದ್ದ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ಕತ್ತಿ ಹಿಡಿದು ಬಾಲಕಿಯ ಮನೆಗೆ ಬಂದು ಆಕೆಯ ಪೋಷಕರ ಮೇಲೆ ತೀವ್ರ ಹಲ್ಲೆ ನಡೆಸಿದ್ದ. ಬಳಿಕ ಬಾಲಕಿಯನ್ನು ಆಕೆಯ ಮನೆಯಿಂದ 150 ಮೀಟರ್ ದೂರ ಎಳೆದೊಯ್ದು ಕತ್ತಿಯಿಂದ ಆಕೆಯ ಕುತ್ತಿಗೆಯನ್ನು ಕಡಿದು ತುಂಡರಿಸಿ ರುಂಡ ಸಹಿತ ಸ್ಥಳದಿಂದ ಪರಾರಿಯಾಗಿ ಪೊದೆಯೊಂದರ ಒಳಗೆ ರುಂಡವನ್ನು ಎಸೆದಿದ್ದ. ಈ ಘಟನೆಯಿಂದ ಇಡೀ ಕೊಡಗು ಜಿಲ್ಲೆ ಸಹಿತ ರಾಜ್ಯವೇ ಬೆಚ್ಚಿ ಬಿದ್ದಿತ್ತು.
ಆರೋಪಿ ಬಂದೂಕು ಸಹಿತ ಕಾಡಿನಲ್ಲಿ ಅವಿತಿದ್ದಾನೆ ಎಂಬ ಮಾಹಿತಿ ಹಾಗೂ ಸಂತ್ರಸ್ತೆಯ ಕುಟುಂಬದ ಮೇಲೆ ಮತ್ತೆ ಹಲ್ಲೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ಕುಟುಂಬದವರ ರಕ್ಷಣೆಗಾಗಿ ಎಂಟು ಮಂದಿ ಶಸ್ತ್ರಸಜ್ಜಿತ ಪೊಲೀಸರನ್ನು ನಿಯೋಜಿಸಲಾಗಿತ್ತು. ಕೊಡಗು ಪೊಲೀಸ್ ಕಮಾಂಡೋಗಳು ದಟ್ಟ ಕಾಡಿನಲ್ಲಿ ಅವಿತಿದ್ದ ಆರೋಪಿಗಾಗಿ ಎರಡು ದಿನಗಳ ಕಾಲ ನಿರಂತರ ಶೋಧ ನಡೆಸಿದ್ದರು. ಬಳಿಕ ಮೇ 11ರಂದು ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು. ಆತನ ಸಮ್ಮುಖದಲ್ಲಿ ಕೃತ್ಯಕ್ಕೆ ಬಳಸಿದ್ದ ಕತ್ತಿ ಹಾಗೂ ಪೊದೆಯಲ್ಲಿ ಎಸೆದಿದ್ದ ಬಾಲಕಿಯ ರುಂಡವನ್ನು ವಶಕ್ಕೆ ಪಡೆದಿದ್ದರು.
ಮರಣದಂಡನೆ ಶಿಕ್ಷೆ :
ಪ್ರಕರಣದ ತನಿಖೆ ನಡೆಸಿದ ಸೋಮವಾರಪೇಟೆ ಪೊಲೀಸರು ಆರೋಪಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ ವಿರುದ್ಧ ಮಡಿಕೇರಿಯ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಜಿ. ಸುರೇಂದ್ರ ಅವರು ನವೆಂಬರ್ 12ರಂದು ಆರೋಪಿಯ ವಿರುದ್ಧದ ಕೊಲೆ ಆರೋಪ ಸಾಬೀತಾಗಿದೆ ಎಂದು ಘೋಷಿಸಿ, ಶಿಕ್ಷೆಯ ಪ್ರಮಾಣವನ್ನು ನವೆಂಬರ್ 21ರಂದು ಪ್ರಕಟಿಸುವುದಾಗಿ ತಿಳಿಸಿದ್ದರು.
ಶನಿವಾರ ಸಂಜೆ ಅಪರಾಧಿ ಓಂಕಾರಪ್ಪ ಅಲಿಯಾಸ್ ಪ್ರಕಾಶ್ನನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದಾಗ, ನ್ಯಾಯಾಧೀಶ ಜಿ. ಸುರೇಂದ್ರ ಅವರು ಮರಣದಂಡನೆ ಶಿಕ್ಷೆ ವಿಧಿಸಿ ತೀರ್ಪು ಪ್ರಕಟಿಸಿದರು. ಅಲ್ಲದೆ, 81 ಸಾವಿರ ರೂ. ದಂಡ ವಿಧಿಸಿ, ನೊಂದ ಬಾಲಕಿಯ ಕುಟುಂಬಕ್ಕೆ ಸರ್ಕಾರದಿಂದ 16.5 ಲಕ್ಷ ರೂ. ಪರಿಹಾರ ನೀಡುವಂತೆ ಆದೇಶಿಸಿದರು.
ವಿರಳಾತಿವಿರಳ ಪ್ರಕರಣವೆಂದು ಪರಿಗಣಿಸಲು ಮನವಿ :
ಬಾಲಕಿಯ ರುಂಡ ಕತ್ತರಿಸಿ ಹತ್ಯೆ ಮಾಡಿದ ಪ್ರಕರಣವನ್ನು ವಿರಳಾತಿವಿರಳ ಪ್ರಕರಣವೆಂದು ಪರಿಗಣಿಸಬೇಕೆಂದು ನ.19ರ ವಿಚಾರಣೆ ವೇಳೆ ನ್ಯಾಯಾಧೀಶರ ಮುಂದೆ ವಾದ ಮಂಡಿಸಿ ಮನವಿ ಮಾಡಲಾಗಿತ್ತು. ನಮ್ಮ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯ ಇದೀಗ ಅಪರಾಧಿಗೆ ಮರಣದಂಡನೆ ಶಿಕ್ಷೆ ವಿಧಿಸಿದೆ. ಈ ತೀರ್ಪಿನಿಂದ ನೊಂದ ಬಾಲಕಿಯ ಆತ್ಮಕ್ಕೆ ಶಾಂತಿ ಲಭಿಸಿದೆ ಎಂದು ವಿಶೇಷ ಸರ್ಕಾರಿ ಅಭಿಯೋಜಕ ಬಿ.ಎಸ್. ರುದ್ರ ಪ್ರಸನ್ನ ತಿಳಿಸಿದ್ದಾರೆ.






