ಮಡಿಕೇರಿ | ಹರ್ ಮಂದಿರ್ ವಸತಿ ಶಾಲೆಯಲ್ಲಿ ಬೆಂಕಿ ಅವಘಡ: ಬಾಲಕ ಸಜೀವ ದಹನ

ಮಡಿಕೇರಿ, ಅ.9: ಮಡಿಕೇರಿ ಸಮೀಪದ ಕಾಟಕೇರಿ ಗ್ರಾಮದಲ್ಲಿರುವ ಹರ್ ಮಂದಿರ್ ವಸತಿಯುತ ಆಶ್ರಮ ಶಾಲೆಯಲ್ಲಿ ಇಂದು ಮುಂಜಾನೆ ಸಂಭವಿಸಿದ ಬೆಂಕಿ ಅವಘಡದಲ್ಲಿ ಏಳು ವರ್ಷದ ಬಾಲಕನೋರ್ವ ಸಜೀವ ದಹನಗೊಂಡ ಹೃದಯ ವಿದ್ರಾವಕ ಘಟನೆ ಇಂದು ಮುಂಜಾನೆ ಸಂಭವಿಸಿದೆ.
ಪುಷ್ಪಕ್
ಭಾಗಮಂಡಲ ಸಮೀಪದ ಚೆಟ್ಟಿಮಾನಿ ನಿವಾಸಿ ಅನಿಲ್ ಕುಮಾರ್ ಎಂಬವರ ಪುತ್ರ ಪುಷ್ಪಕ್ ಕೆ.ಎ.(7) ಮೃತಪಟ್ಟ ಬಾಲಕ. ಈತ ಆಶ್ರಮ ಶಾಲೆಯ 2ನೇ ತರಗತಿ ವಿದ್ಯಾರ್ಥಿಯಾಗಿದ್ದ.
ಇಂದು ನಸುಕಿನ ವೇಳೆ ನಾಲ್ಕು ಗಂಟೆ ಈ ಅಗ್ನಿ ದುರಂತ ಸಂಭವಿಸಿದೆ. ದಟ್ಟ ಹೊಗೆ ಮತ್ತು ಬೆಂಕಿಯ ಕೆನ್ನಾಲಿಗೆ ಆವರಿಸುತ್ತಿದ್ದಂತೆ ಶಾಲೆಯಲ್ಲಿದ್ದ ಇತರ 52ರಷ್ಟು ವಿದ್ಯಾರ್ಥಿಗಳು ಹೊರಗೆ ಓಡಿ ಅಪಾಯದಿಂದ ಪಾರಾಗಿದ್ದಾರೆ. ಆದರೆ, ನಿದ್ದೆಯಲ್ಲಿದ್ದ ಪುಷ್ಪಕ್ ಕೋಣೆಯೊಳಗೆ ಸಿಲುಕಿಕೊಂಡಿದ್ದು, ಹೊರಬರಲಾಗದೆ ಕೊನೆಯುಸಿರೆಳೆದಿರುವುದಾಗಿ ತಿಳಿದುಬಂದಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿಯನ್ನು ನಂದಿಸಿದ್ದಾರೆ. ಆದರೆ ಅಷ್ಟರಲ್ಲಿ ಆಶ್ರಮ ಭಾಗಶಃ ಧ್ವಂಸಗೊಂಡಿದೆ.
ಮಡಿಕೇರಿ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಬೆಂಕಿ ಅವಘಡಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ಆರಂಭಿಸಿದ್ದಾರೆ.
ಪುಟ್ಟ ಬಾಲಕ ಪುಷ್ಪಕ್ನ ದುರಂತ ಸಾವು ಇಡೀ ಕಟಕೇರಿ ಗ್ರಾಮದಲ್ಲಿ ಶೋಕದ ವಾತಾವರಣವನ್ನು ಸೃಷ್ಟಿಸಿದೆ. ಮೃತ ಬಾಲಕನ ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ.
ಪುಷ್ಪಕ್ ಎಲ್.ಕೆ.ಜಿ.ಯಿಂದಲೇ ಹರ್ ಮಂದಿರ್ ಆಶ್ರಮದಲ್ಲಿ ಕಲಿಯುತ್ತಿದ್ದ ಎನ್ನಲಾಗಿದೆ. ಬಾಲಕನ ತಾಯಿ ತ್ರಿವೇಣಿ, ಕುಂದಚೇರಿ ಪ್ರಾಥಮಿಕ ಶಾಲೆಯಲ್ಲಿ ಅತಿಥಿ ಶಿಕ್ಷಕರಾಗಿದ್ದಾರೆ. ತಂದೆ ಅನಿಲ್ ಕುಮಾರ್ ಕೃಷಿಕರಾಗಿದ್ದಾರೆ. ಮಗನ ಸಾವಿನ ಸುದ್ದಿ ಕೇಳಿ ಪೋಷಕರು ಆಘಾತಕ್ಕೆ ಒಳಗಾಗಿದ್ದಾರೆ. ಚೆಟ್ಟಿಮಾನಿ ಗ್ರಾಮದಲ್ಲಿ ನೀರವ ಮೌನ ಆವರಿಸಿದೆ.







