ಮಡಿಕೇರಿ | ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರು ಮೃತ್ಯು

ಮಡಿಕೇರಿ: ಶಿಥಿಲಾವಸ್ಥೆಯಲ್ಲಿದ್ದ ಶೌಚಾಲಯದ ಗುಂಡಿಗೆ ಬಿದ್ದು ಇಬ್ಬರು ಮೃತಪಟ್ಟ ಘಟನೆ ಸೋಮವಾರಪೇಟೆ ತಾಲ್ಲೂಕಿನ ಮಾದಾಪುರ ಸಮೀಪದ ಹೊಸತೋಟ ಗ್ರಾಮದಲ್ಲಿ ಸೋಮವಾರ ಸಂಜೆ ನಡೆದಿದೆ.
ಹೊಸತೋಟ ಗ್ರಾಮದ ನಿವಾಸಿಗಳಾದ ನಿತ್ಯ(47) ಹಾಗೂ ಜನಾರ್ಧನ(47) ಮೃತಪಟ್ಟವರು. ಹಳೇ ಶೌಚಾಲಯದ ಬಳಿ ಬರುತ್ತಿದ್ದ ಸಂದರ್ಭ ಇದ್ದಕ್ಕಿದ್ದಂತೆ ಶೌಚ ಗುಂಡಿ ಕುಸಿದು ನಿತ್ಯ ಅದರಲ್ಲಿ ಸಿಲುಕಿಕೊಂಡಿದ್ದರು. ಇದನ್ನು ಗಮನಿಸಿ ನಿತ್ಯ ಅವರ ರಕ್ಷಣೆಗಾಗಿ ಧಾವಿಸಿದ ಜನಾರ್ಧನ ಅವರೂ ಗುಂಡಿಯಲ್ಲಿ ಸಿಲುಕಿಕೊಂಡರು.
ತಕ್ಷಣ ಸ್ಥಳೀಯರು ಇಬ್ಬರನ್ನು ಗುಂಡಿಯಿಂದ ಮೇಲಕ್ಕೆತ್ತಿ ಮಾದಾಪುರ ಆಸ್ಪತ್ರೆಗೆ ಕರೆದೊಯ್ದರು. ಅಷ್ಟರಲ್ಲೇ ನಿತ್ಯ ಸಾವನ್ನಪ್ಪಿದ್ದರೆ, ಜನಾರ್ಧನ ಅವರು ಚಿಂತಾಜನಕ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ. ಮಡಿಕೇರಿಯ ಜಿಲ್ಲಾಸ್ಪತ್ರೆಗೆ ಕರೆದೊಯ್ಯುವ ಸಂದರ್ಭ ಇವರೂ ಸಾವನ್ನಪ್ಪಿದ್ದಾರೆ.
ಶಾಸಕರ ಸಾಂತ್ವನ
ಮಡಿಕೇರಿ ಕ್ಷೇತ್ರದ ಶಾಸಕ ಡಾ.ಮಂತರ್ ಗೌಡ ಅವರು ಆಸ್ಪತ್ರೆಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ಸಾಂತ್ವನ ಹೇಳಿ, ಸರಕಾರದಿಂದ ಸೂಕ್ತ ಪರಿಹಾರದ ಭರವಸೆ ನೀಡಿದರು.




