ಟಿ.ಶೆಟ್ಟಿಗೇರಿಯಿಂದ ಪೊನ್ನಂಪೇಟೆಗೆ ಸಾಗಿದ ಕೊಡವರ ಪಾದಯಾತ್ರೆ

ಮಡಿಕೇರಿ: ತಮ್ಮ ಹಕ್ಕುಗಳಿಗಾಗಿ ಒತ್ತಾಯಿಸಿ ಅಖಿಲ ಕೊಡವ ಸಮಾಜದ ನೇತೃತ್ವದಲ್ಲಿ ವಿವಿಧ ಕೊಡವ ಸಂಘಟನೆಗಳ ಸಹಯೋಗದಲ್ಲಿ ಕೊಡವರು ಆರಂಭಿಸಿರುವ ಬೃಹತ್ ಪಾದಯಾತ್ರೆ ಇಂದು ದಕ್ಷಿಣ ಕೊಡಗಿನ ಟಿ.ಶೆಟ್ಟಿಗೇರಿಯಿಂದ ಪೊನ್ನಂಪೇಟೆ ವರೆಗೆ ಸಾಗಿತು.
ಕೊಡವ ಸಾಂಪ್ರದಾಯಿಕ ಉಡುಪಿನಲ್ಲಿ ಪಾದಯಾತ್ರೆ ನಡೆಸಿದ ಕೊಡವರಿಗೆ ವಿವಿಧೆಡೆ ಬೆಂಬಲ ವ್ಯಕ್ತವಾಯಿತು. ವೀಲ್ ಚೇರ್'ನಲ್ಲಿ ಆಗಮಿಸಿದ ಹಿರಿಯ ಮಹಿಳೆಯೊಬ್ಬರು ಕೊಡವಾಮೆ ಬಾಳೊ ಪಾದಯಾತ್ರೆಯಲ್ಲಿ ಪಾಲ್ಗೊಂಡು ಗಮನ ಸೆಳೆದರು. ಹೈಸೊಡ್ಲೂರು ಗ್ರಾಮದ ಬಯವಂಡ ಸರಸ್ವತಿ ಪೂವಯ್ಯ(86) ಇವರು ನಡೆಯಲು ಆಗದ ಕಾರಣ ವೀಲ್ ಚೇರ್'ನಲ್ಲಿ ಪಾದಯಾತ್ರೆಗೆ ಆಗಮಿಸಿ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.
ಟಿ-ಶೆಟ್ಟಿಗೇರಿ ಕೊಡವ ಸಮಾಜದ ಪೊಮ್ಮಕ್ಕಡ ಕೂಟ ಹಾಗೂ ಸಂಭ್ರಮ ಮಹಿಳಾ ಸಾಂಸ್ಕೃತಿಕ ಕೇಂದ್ರದ ಮಹಿಳೆಯರು ಸಾಂಪ್ರದಾಯಿಕ ತಳಿಯತಕ್ಕಿ ಬೊಳಕ್ ನೊಂದಿಗೆ ಪಾದಯಾತ್ರೆಯಲ್ಲಿ ಪಾಲ್ಗೊಂಡರು. ಫೆ.7 ರಂದು ಮಡಿಕೇರಿ ನಗರದಲ್ಲಿ ಕೊಡವರ ಪಾದಯಾತ್ರೆ ಸಮಾರೋಪಗೊಳ್ಳಲಿದೆ.
Next Story