ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿ ಬೆಳೆಗಾರ ಸ್ಥಳದಲ್ಲೇ ಮೃತ್ಯು

ಮಡಿಕೇರಿ: ಕಾಡಾನೆ ದಾಳಿಗೆ ಸಿಲುಕಿದ ಬೆಳೆಗಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಸಿದ್ದಾಪುರ ಸಮೀಪದ ಕರಡಿಗೋಡು ಗ್ರಾಮದಲ್ಲಿ ನಡೆದಿದೆ.
ಮಡಿಕೇರಿ ತಾಲ್ಲೂಕು ತಹಶೀಲ್ದಾರ್ ಪ್ರವೀಣ್ ಅವರ ಮಾವ, ಕರಡಿಗೋಡು ನಿವಾಸಿ ಕುಕ್ಕುನೂರು ಪುರುಷೋತ್ತಮ (78) ಮೃತರು ಎಂದು ಗುರುತಿಸಲಾಗಿದೆ.
ಶುಕ್ರವಾರ ಸಂಜೆ ಸುಮಾರು 6.30ರ ವೇಳೆಗೆ ಮನೆಯ ಸಮೀಪದ ತೋಟಕ್ಕೆ ತೆರಳಿದ್ದವರು ನಂತರ ಮನೆಗೆ ಬಂದಿರಲಿಲ್ಲ. ಇದರಿಂದ ಗಾಬರಿಗೊಂಡ ಕುಟುಂಬದ ಸದಸ್ಯರು ತೋಟದಲ್ಲಿ ಹುಡುಕಾಟ ನಡೆಸಿದಾಗ ಪುರುಷೋತ್ತಮ ಅವರು ಕಾಡಾನೆ ತುಳಿತಕ್ಕೆ ಸಿಲುಕಿ ಮೃತಪಟ್ಟಿರುವುದು ಕಂಡು ಬಂದಿದೆ. ಅಲ್ಲದೆ ಕಾಡಾನೆಯೊಂದು ತೋಟ ವ್ಯಾಪ್ತಿಯಲ್ಲಿ ಓಡಾಡುತ್ತಿರುವುದು ಗೋಚರಿಸಿದೆ.
ಮಾಹಿತಿ ತಿಳಿದ ತಕ್ಷಣ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿದರು. ರಾಜ್ಯ ವನ್ಯಜೀವಿ ಮಂಡಳಿಯ ಸದಸ್ಯ ಸಂಕೇತ್ ಪೂವಯ್ಯ ಅವರು ಸ್ಥಳಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಅಲ್ಲದೆ ಸೂಕ್ತ ಪರಿಹಾರ ದೊರಕಿಸಿ ಕೊಡುವ ಭರವಸೆ ನೀಡಿದರು.
ಇಂದು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಮೃತ ಪುರುಷೋತ್ತಮ ಅವರ ಮನೆಗೆ ಭೇಟಿ ನೀಡಿ ಅಂತಿಮ ಗೌರವ ಅರ್ಪಿಸಿದರು.
ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಉಪಟಳ ನೀಡುತ್ತಿರುವ ಕಾಡಾನೆ ಸೆರೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
1 ತಿಂಗಳಲ್ಲಿ ಮೂವರು ಮೃತ್ಯು
ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಡಾನೆ ದಾಳಿಯಿಂದ ಕಳೆದ ಒಂದು ತಿಂಗಳಿನಲ್ಲಿ ಮೂವರು ಮೃತಪಟ್ಟಿದ್ದಾರೆ. ಆತಂಕಗೊಂಡಿರುವ ಗ್ರಾಮಸ್ಥರು ಅರಣ್ಯ ಇಲಾಖೆ ತಕ್ಷಣ ಆನೆಯನ್ನು ಸೆರೆ ಹಿಡಿಯಬೇಕೆಂದು ಒತ್ತಾಯಿಸಿದ್ದಾರೆ.