ಬಾನು ಮುಸ್ತಾಕ್‌ಗೆ ʼಬೂಕರ್ʼ ಪ್ರಶಸ್ತಿ ದೊರೆತಿರುವುದು ಬಂಡಾಯ ಸಾಹಿತ್ಯಕ್ಕೆ ಜಾಗತಿಕವಾಗಿ ಸಿಕ್ಕಂತಹ ಮನ್ನಣೆ : ಚಿಂತಕ ಕೆ.ದೊರೈರಾಜ್

ತುಮಕೂರು : ಲೇಖಕಿ ಬಾನು ಮುಸ್ತಾಕ್ ಅವರ ಸಾಹಿತ್ಯಕ್ಕೆ ಬೂಕರ್ ಪ್ರಶಸ್ತಿ ದೊರೆತಿರುವುದು ಬಂಡಾಯ ಸಾಹಿತ್ಯದ ಮೌಲ್ಯಕ್ಕೆ ಜಾಗತಿಕವಾಗಿ ಸಿಕ್ಕಂತಹ ಮನ್ನಣೆಯಾಗಿದೆ. ಬಂಡಾಯ ಸಾಹಿತ್ಯ ಆತ್ಮವಿಶ್ವಾಸವನ್ನು ಉಂಟು ಮಾಡಿದೆ. ನಾವು ಪ್ರತಿಪಾದಿಸುವಂತಹ ಬಂಡಾಯ ಸಾಹಿತ್ಯದ ಮೌಲ್ಯಗಳು ಜಾಗತಿಕವಾಗಿ ಅಂಗೀಕಾರ ಸಿಕ್ಕಿದೆ ಎಂದು ಜನಪರ ಚಿಂತಕ ಕೆ.ದೊರೈರಾಜ್ ತಿಳಿಸಿದ್ದಾರೆ.
ಬಂಡಾಯ ಸಂಘಟನೆ ತುಮಕೂರು ಘಟಕದಿಂದ ತುಮಕೂರಿನಲ್ಲಿ ಹಮ್ಮಿಕೊಂಡಿದ್ದ ಚಳವಳಿಯ ಸಂಗಾತಿಯಾಗಿ ಕನ್ನಡ ಸಾಹಿತ್ಯ ಎಂಬ ರಾಜ್ಯಮಟ್ಟದ ಸಾಹಿತ್ಯ ಸಂವಾದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ವಿಮರ್ಶೆಗಳು ಇರಬೇಕು. ವಿಮರ್ಶೆ ಮಾಡುವುದರ ಜೊತೆಗೆ ತಮ್ಮನ್ನು ತಾವು ಮರುವಿಮರ್ಶೆಗೆ ಒಳಗಾಗಬೇಕು ಎಂದರು
ಈ ಕಾಲಘಟ್ಟಕ್ಕೆ ತಕ್ಕಂತೆ ನಮ್ಮ ಎದುರಿಗಿರುವ ಸವಾಲುಗಳನ್ನು ಅದು ಪ್ರಭುತ್ವ ಒಡ್ಡುವ ಸವಾಲಾಗಿರಬಹುದು; ಯಥಾಸ್ಥಿತಿವಾದಿಗಳ ಸಂಘಟನೆ ಜನರಲ್ಲಿ ಮನಸ್ಸಿನಲ್ಲಿ ಬಿತ್ತಬಹುದಾದಂತಹ ಸವಾಲುಗಳಿರಬಹುದು; ಇಂಥ ಸವಾಲುಗಳನ್ನು ಹೇಗೆ ಎದುರಿಸಬೇಕು ಎನ್ನುವುದಕ್ಕೆ ನಮಗೆ ನಾವು ಮರು ವಿಮರ್ಶೆಗೆ ಒಳಗಾಗುವ ಅಗತ್ಯವಿದೆ. ಅದನ್ನು ಮುನ್ನಡೆಸಲು ಒಂದು ವಿಷನ್ ಕ್ರಿಯೇಟ್ ಮಾಡುವಂತಹ ಮಾರ್ಗಗಳ ಬಗ್ಗೆ ತಿಳಿದುಕೊಳ್ಳುವ ಅಗತ್ಯವಿದೆ. ಈ ತಿಳಿವಳಿಕೆ ಎನ್ನುವುದು ಸಂವಾದದಿಂದ, ಸಾಮೂಹಿಕ ಭಾಗವಹಿಸುವಿಕೆಯಿಂದ ಸಾಧ್ಯವಿದೆ. ಅದಕ್ಕೆ ಇಂತಹ ಕಾರ್ಯಕ್ರಮಗಳು ಬಹಳ ಮುಖ್ಯವೆನಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ದುಡಿಯುವವರ, ಕಾರ್ಮಿಕರ, ಕೆಳಜಾತಿಗಳ ಹೆಣ್ಣುಮಕ್ಕಳ ಬದುಕು ತುಂಬಾ ಕಷ್ಟದಲ್ಲಿದೆ. ಹಾಗಾಗಿ ಚಳವಳಿಗಾರರಿಗೆ, ಚಳವಳಿಯ ಸಂಗಾತಿಗಳಾದಂತಹ ಸಾಹಿತಿಗಳಿಗೆ ಹೆಚ್ಚು ಜವಾಬ್ದಾರಿ ಇದೆ. ಅಂದರೆ ಹೆಚ್ಚು ಕ್ರಿಯಾಶೀಲರಾಗಿ ಈ ಸಂಘಟನೆಗಳನ್ನು ಒಗ್ಗೂಡಿಸುವಂತಹದ್ದು, ಚಳವಳಿಗಳನ್ನು ಶಕ್ತಿಗೊಳಿಸುವಂತಹದ್ದು ಮಾಡುತ್ತಲೇ ಮೌಲ್ಯಯುತವಾದ ಸಮಾಜವನ್ನು ಪ್ರಭುತ್ವವನ್ನು ಕಟ್ಟುವ ಕಡೆ ಸಾಗೋಣ ಎಂದು ಸಲಹೆ ನೀಡಿದರು.
ಸಾಹಿತ್ಯ ಸಂವಾದ ಕಾರ್ಯಕ್ರಮವನ್ನು ಕಾವ್ಯ ಗಾಯನದ ಮೂಲಕ ಡಾ.ಲಕ್ಷ್ಮಣದಾಸ್ ಉದ್ಘಾಟಿಸಿದರು. ನಾಡೋಜ ಸಾಹಿತಿ ಪ್ರೊ.ಬರಗೂರು ರಾಮಚಂದ್ರಪ್ಪ ಕಾರ್ಯಕ್ರಮದ ದಿಕ್ಕೂಚಿ ಭಾಷಣ ಮಾಡಿದರು.
ಸಾಹಿತಿ ಡಾ.ಕರೀಗೌಡ ಬೀಚನಹಳ್ಳಿ ಭಾಗವಹಿಸಿದ್ದರು. ಕಾದಂಬರಿಕಾರ ಡಾ.ಒ.ನಾಗರಾಜ್ ಪ್ರಾಸ್ತಾವಿಕ ಭಾಷಣ ಮಾಡಿದರು. ಬಂಡಾಯ ಸಾಹಿತ್ಯ ಸಂಘಟನೆಯ ಜಿಲ್ಲಾ ಸಂಚಾಲಕ ಡಾ.ನಾಗಭೂಷಣ ಬಗ್ಗನಡು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.
ಕಾರ್ಯಕ್ರಮದಲ್ಲಿ ಹಲವು ಭಾಗವಹಿಸಿದರು.







