ಭಾಷೆಗಳು ನಾಶವಾದರೆ ಸಮುದಾಯಗಳ ಏಳಿಗೆ ಅಸಾಧ್ಯ : ಡಾ.ಬಿಳಿಮಲೆ
ಕುಶಾಲನಗರದಲ್ಲಿ ಅರೆಭಾಷೆ ಗಡಿನಾಡ ಉತ್ಸವ-2025

ಮಡಿಕೇರಿ : ಭಾಷೆಗಳು ನಾಶವಾದಲ್ಲಿ ಸಮುದಾಯಗಳ ಏಳಿಗೆ ಅಸಾಧ್ಯ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಪುರುಷೋತ್ತಮ ಬಿಳಿಮಲೆ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಇದರ ಆಶ್ರಯದಲ್ಲಿ ಕುಶಾಲನಗರ ಗೌಡ ಸಮಾಜ ಮತ್ತು ಅಂಗಸಂಸ್ಥೆಗಳ ಹಾಗೂ ವಿವಿಧ ಗೌಡ ಸಮಾಜಗಳ ಸಂಯುಕ್ತ ಆಶ್ರಯದಲ್ಲಿ ಕುಶಾಲನಗರದಲ್ಲಿ ರವಿವಾರ ನಡೆದ ಅರೆ ಭಾಷೆ ಗಡಿನಾಡ ಉತ್ಸವ -2025 ಕಾರ್ಯಕ್ರಮದಲ್ಲಿ ದಿಕ್ಸೂಚಿ ಭಾಷಣ ಮಾಡಿದ ಅವರು, ತಾಯಿನುಡಿಗಳನ್ನು ಬಳಕೆ ಮಾಡುವ ಮೂಲಕ ಉಳಿಸುವುದರೊಂದಿಗೆ ಅಕಾಡಮಿ ಮೂಲಕ ಭಾಷೆಯ ಅಭಿವೃದ್ಧಿಗೆ ಕಾರ್ಯ ಸೂಚಿ ನೀಡುವ ಕೆಲಸವಾಗಬೇಕಾಗಿದೆ ಎಂದು ಹೇಳಿದರು.
ಪ್ರಸಕ್ತ ಭಾಷೆ ಸಂಸ್ಕೃತಿ ದಿಕ್ಕಾಪಾಲಾಗಿ ಹೋಗುತ್ತಿದ್ದು, ಜನಗಣತಿ ಮೂಲಕ ತಮ್ಮ ಸಮುದಾಯದ ಜನಸಂಖ್ಯೆ ಮಾಹಿತಿಯನ್ನು ಸರಕಾರಕ್ಕೆ ಲಭಿಸುವಂತೆ ಮಾಡುವುದು, ಮುಖ್ಯ ಭಾಷೆ -ಉಪಭಾಷೆಗಳ ನಡುವೆ ಸಾಧಕ ಬಾಧಕಗಳ ಬಗ್ಗೆ ಚರ್ಚಿಸುವುದು ಈ ಮೂಲಕ ಭಾಷೆಗಳ ಬೆಳವಣಿಗೆ ಸಾಧ್ಯ ಎಂದ ಅವರು, ಅಧಿಕಾರದ ಮೂಲಕ ಭಾಷೆಗಳನ್ನು ನಿರ್ಧಾರ ಮಾಡುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದರು.
ಚರಿತ್ರೆಗಳು ಜನರಿಗೆ ಭಾರ ಆಗದೆ ಶಕ್ತಿ ನೀಡುವಂತಾಗಬೇಕು. ನಮ್ಮ ನಡುವೆ ಬಳಕೆ ಮಾಡುವ ಪದಗಳು ಮತ್ತಿತರ ವಿಷಯಗಳ ಸಂಗ್ರಹ ಮೂಲಕ ಕೋಶ ತಯಾರಿಸುವಂತೆ ಸಲಹೆ ನೀಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಸದಾನಂದ ಮಾವಜಿ ಮಾತನಾಡಿ, ಅಕಾಡಮಿ ಮೂಲಕ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಪ್ರಸಕ್ತ ಕುಶಾಲನಗರದಲ್ಲಿ ಗಡಿನಾಡ ಉತ್ಸವ ನಾಲ್ಕನೇ ಕಾರ್ಯಕ್ರಮವಾಗಿದ್ದು, ಅರೆಭಾಷೆ ಉಳಿವಿನ ಬಗ್ಗೆ ಸಮುದಾಯದ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಈ ಸಂಬಂಧ ಹಲವು ಪುಸ್ತಕಗಳನ್ನು ಈಗಾಗಲೇ ಅಕಾಡಮಿ ಮೂಲಕ ಬಿಡುಗಡೆಗೊಳಿಸಲಾಗಿದೆ. ಸಂಶೋಧನಾ ಪ್ರಬಂಧಗಳನ್ನು ಕೂಡ ಪ್ರಕಟಿಸಲಾಗಿದೆ. 12 ಕೃತಿಗಳನ್ನೂ ಬಿಡುಗಡೆಗೊಳಿಸಲಾಗಿದೆ ಎಂದು ಮಾಹಿತಿ ನೀಡಿದರು.
ಸುಳ್ಯದಲ್ಲಿ ಅರೆಭಾಷೆ ಸಾಹಿತ್ಯ ಸಮ್ಮೇಳನ ನಡೆಯುವ ಬಗ್ಗೆ ಮಾಹಿತಿ ಒದಗಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದ ಮಡಿಕೇರಿ ಶಾಸಕ ಡಾ. ಮಂತರ್ ಗೌಡ ಮಾತನಾಡಿ, ಅಕಾಡಮಿ ವತಿಯಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಭಾಷಾ ಜಾಗೃತಿ ಮೂಡಿಸಬಹುದು ಎಂದು ಸಲಹೆ ನೀಡಿದರು.
ಮಾಜಿ ಸಭಾಪತಿ ಕೆ. ಜಿ. ಬೋಪಯ್ಯ ಮಾತನಾಡಿ, ಅಕಾಡಮಿ ಮೂಲಕ ಸಂಸ್ಕೃತಿ ಸಾಹಿತ್ಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡುವಂತೆ ಆಗಬೇಕು. ಈಗಾಗಲೇ ಅಧ್ಯಯನ ಪೀಠ ಸ್ಥಾಪನೆಯಾಗಿದ್ದು ಸಮಾಜದ ಮೂಲ ಸಂಸ್ಕೃತಿ ಬಗ್ಗೆ ನಿರಂತರ ಅಧ್ಯಯನ ಮಾಡುವಂತಾಗಬೇಕು ಎಂದು ಹೇಳಿದರು.
ಅಕಾಡಮಿ ಸದಸ್ಯ ಸೂದನ ಈರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.
ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡಮಿ ಅಧ್ಯಕ್ಷ ಸದಾನಂದ ಮಾವಜಿ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ, ಸಾಹಿತ್ಯ ಅಕಾಡಮಿಯ ರಿಜಿಸ್ಟ್ರಾರ್ ಚಿನ್ನಸ್ವಾಮಿ, ಸದಸ್ಯ ಸಂದೀಪ್ ಪೂಳಕಂಡ, ಕುಶಾಲನಗರ ಗೌಡ ಸಮಾಜ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಕುಶಾಲನಗರ ಗೌಡ ಯುವಕ ಸಂಘದ ಅಧ್ಯಕ್ಷ ಕೊಡಗನ ಹರ್ಷ,ಆಲೂರು ಸಿದ್ದಾಪುರದ ದೇವಾಯೀರ ಗಿರೀಶ್, ಸುಂಟಿಕೊಪ್ಪ ಸಮಾಜದ ಕುಂಜಿಲನ ಮಂಜುನಾಥ್, ಗುಡ್ಡೆ ಹೊಸೂರು ಗೌಡ ಸಮಾಜ ಅಧ್ಯಕ್ಷ ಗುಡ್ಡೆಮನೆ ವಿಶುಕುಮಾರ್, ನಂಜರಾಯಪಟ್ಟಣದ ಕೆಮ್ಮಾರನ ಉತ್ತಯ್ಯ, ಚೆಟ್ಟಳ್ಳಿ ಸಮಾಜದ ರಾಘವಯ್ಯ ಐಯ್ಯಂಡ್ರ, ಚಿಕ್ಕತ್ತೂರು ಸಮಾಜದ ಚೆರಿಯ ಮನೆ ಮಂದಪ್ಪ, ಕೊಡಗು ಗೌಡ ವಿದ್ಯಾಸಂಘದ ಅಧ್ಯಕ್ಷ ನವೀನ ಅಂಬೆಕ್ಕಲ್ ಮತ್ತಿತರರು ಇದ್ದರು.
ಕಾರ್ಯಕ್ರಮಕ್ಕೂ ಮುನ್ನ ಕುಶಾಲನಗರ ಕೊಪ್ಪಗಡಿಭಾಗದ ಕಾವೇರಿ ಪ್ರತಿಮೆ ಬಳಿ ಹೊರಟ ಮೆರವಣಿಗೆಗೆ ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಸೂರ್ತಲೆ ಸೋಮಣ್ಣ ಚಾಲನೆ ನೀಡಿದರು. ಅಕಾಡಮಿ ಸದಸ್ಯ, ಸಂಚಾಲಕ ಪೊನ್ನಚ್ಚನ ಮೋಹನ್ ಸ್ವಾಗತಿಸಿದರು.
ಭಾಷೆಗಳು ಉಳಿದಲ್ಲಿ ಮಾತ್ರ ದೇಶದ ಉಳಿವು ಸಾಧ್ಯ. ದೇಶದ 172 ಭಾಷೆಗಳು ಮುಂದಿನ ಐದು ದಶಕಗಳಲ್ಲಿ ನಶಿಸಿ ಹೋಗುವ ಸಾಧ್ಯತೆ ಇದೆ. ಮುಂದಿನ ದಿನಗಳಲ್ಲಿ ಮಾತೃಭಾಷೆ ಬಿಟ್ಟು ಇತರ ಭಾಷಿಗರ ಗುಲಾಮರಾಗುವ ಸಾಧ್ಯತೆಗಳೇ ಅಧಿಕವಾಗಿದೆ.
-ಡಾ.ಪುರುಷೋತ್ತಮ ಬಿಳಿಮಲೆ,ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ
‘ಕುಸಿಯುತ್ತಿರುವ ಕನ್ನಡ ಭಾಷೆ’ :
ಸ್ಥಳೀಯ ಭಾಷೆ ಉಳಿಸಲು ಸೂಕ್ತ ಕಾರ್ಯ ಯೋಜನೆ ಕಾರ್ಯಸೂಚಿ ಇಲ್ಲದಿರುವುದು, ಈ ನಡುವೆ ಇತರ ಸಮುದಾಯಗಳು ಚಿಕ್ಕ ಸಮುದಾಯಗಳ ಭಾಷೆಗಳನ್ನು ಸಾಯಿಸಲು ಯತ್ನಿಸುತ್ತಿದೆ ಎಂದ ಪುರುಷೋತ್ತಮ ಬಿಳಿಮಲೆ, ಕನ್ನಡ ಭಾಷೆಯೂ ಕುಸಿತ ಕಾಣುತ್ತಿದ್ದು, ಹಿಂದಿ ಭಾಷೆ ಬೆಳೆಯುತ್ತಿರುವ ಅಂಕಿ-ಅಂಶಗಳ ಬಗ್ಗೆ ವಿಷಾದ ವ್ಯಕ್ತಪಡಿಸಿದರು.