ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಮಡಿಕೇರಿಯಲ್ಲಿ ಪ್ರತಿಭಟನೆ

ಮಡಿಕೇರಿ: ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ವಿರೋಧಿಸಿ ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಸಮಿತಿ ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆಯನ್ನು ನಡೆಸಿತು.
ಕೊಡಗು ಜಿಲ್ಲಾ ಖಾಝಿ ಅಬ್ದುಲ್ಲಾ ಫೈಝಿ ಹಾಗೂ ಜಿಲ್ಲಾ ಜಮಾಯತ್ ಉಲಮಾ ಅಧ್ಯಕ್ಷ ಸೈಯ್ಯದ್ ಶಿಹಾಬುದ್ದೀನ್ ಹೈದ್ರೋಸಿ ಅವರ ನೇತೃತ್ವದಲ್ಲಿ, ಜಿಲ್ಲಾ ಸುನ್ನಿ ಸಮನ್ವಯ ಸಮಿತಿಯ ಮಾರ್ಗದರ್ಶನದಲ್ಲಿ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಿಂದ ಗಾಂಧಿ ಮೈದಾನದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು. ವಕ್ಫ್ ತಿದ್ದುಪಡಿ ಮಸೂದೆಗೆ ಪ್ರತಿಭಟನಾಕಾರರು ತೀವ್ರ ವಿರೋಧ ವ್ಯಕ್ತಪಡಿಸಿದರು.
ಪಕ್ಷಾತೀತವಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಅಪಾರ ಸಂಖ್ಯೆಯ ಜನರು ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಯಾವುದೇ ಕಾರಣಕ್ಕೂ ಜಾರಿಗೊಳಿಸಬಾರದೆಂದು ಒತ್ತಾಯಿಸಿದರು.
ಗಾಂಧಿ ಮೈದಾನದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಕೊಡಗು ಜಿಲ್ಲಾ ಖಾಝಿ ಅಬ್ದುಲ್ಲಾ ಫೈಝಿ, ಕೇಂದ್ರ ಸರಕಾರದ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ಬಂದಲ್ಲಿ ಅದು ಮುಸ್ಲಿಂ ಧಾರ್ಮಿಕ ಭಾವನೆಗಳಿಗೆ ಧಕ್ಕೆಯನ್ನುಂಟು ಮಾಡುತ್ತದೆ. ಅಲ್ಲದೆ ದೇವರ ಹೆಸರಿನಲ್ಲಿ ವಕ್ಫ್‌ಗೆ ನೀಡಿದ ಆಸ್ತಿಯ ಸಂರಕ್ಷಣೆಗೆ ತೊಡಕು ಎದುರಾಗಲಿದೆ ಎಂದರು.
ಮಾಜಿ ಶಾಸಕ ಕೆ.ಎಂ.ಇಬ್ರಾಹಿಂ ಮಾಸ್ಟರ್ ಮಾತನಾಡಿ, ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆ ವಿರುದ್ಧ ಸಂಘಟಿತ ಹೋರಾಟ ಅಗತ್ಯವೆಂದರು.
ಸುನ್ನಿ ಸಮನ್ವಯ ಸಮಿತಿಯ ಮಾಧ್ಯಮ ಸಂಚಾಲಕ ಸಿ.ಎಂ.ಹಮೀದ್ ಮೌಲವಿ ಮಾತನಾಡಿ, ವಕ್ಫ್ ಅಧೀನದಲ್ಲಿ ರಾಜ್ಯ ವ್ಯಾಪಿ ಸುಮಾರು 6 ಲಕ್ಷ ಎಕರೆ ಆಸ್ತಿ ಇದೆ. ಈ ಎಲ್ಲಾ ಆಸ್ತಿಗಳು ದೇವರ ಹೆಸರಿನಲ್ಲಿ ದಾನವಾಗಿ ನೀಡಿದ ಜಾಗವಾಗಿದೆ. ಮಸೀದಿ, ಮದ್ರಸಗಳು ಇಂತಹ ಜಾಗವನ್ನು ಹೊಂದಿಕೊಂಡಿವೆ. ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಯ ಮೂಲಕ, ಇಂತಹ ಆಸ್ತಿಯ ಮೇಲಿನ ಹಕ್ಕನ್ನು ಕಳೆದುಕೊಳ್ಳುವ ಅಪಾಯವಿದೆ. ಈ ಹಿನ್ನೆಲೆಯಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಕಾಯ್ದೆಯ ಜಾರಿಗೆ ಅವಕಾಶವನ್ನು ನೀಡಬಾರದೆಂದು ಹೇಳಿದರು.
ಎಸ್‍ಡಿಪಿಐ ಜಿಲ್ಲಾಧ್ಯಕ್ಷ ಅಮೀನ್ ಮೊಹಿಸಿನ್ ಮಾತನಾಡಿ, ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಯಾಗದಂತೆ ತಡೆಯಲು ನಾವೆಲ್ಲರು ಕಟಿಬದ್ಧರಾಗಿ ಮತ್ತಷ್ಟು ದೊಡ್ಡ ಹೋರಾಟ ರೂಪಿಸಬೇಕಾಗಿದೆ. ಸಂಕಷ್ಟ ನಮ್ಮೆದುರಿಗೆ ಬಂದು ನಿಂತಿದ್ದರೂ ನಮ್ಮ ಸಮುದಾಯ ಇನ್ನೂ ಜಾಗೃತವಾಗಿಲ್ಲ. ಇನ್ನಾದರೂ ವಿಷಯದ ಗಂಭೀರತೆಯನ್ನು ಅರಿತು ಎಚ್ಚೆತ್ತುಕೊಳ್ಳಬೇಕು ಎಂದು ಕರೆ ನೀಡಿದರು.
ಪ್ರತಿಭಟನಾ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್ ಮಾತನಾಡಿ, ಕರ್ನಾಟಕ ರಾಜ್ಯದಲ್ಲಿ ವಕ್ಫ್‌ಗೆ ಸಂಬಂಧಿಸಿದ ಸುಮಾರು 6.50 ಲಕ್ಷ ಮತ್ತು ದೇಶದಾದ್ಯಂತ 38 ಲಕ್ಷ ಎಕರೆ ಜಾಗವಿದೆ. ಈ ಆಸ್ತಿಯನ್ನು ವಕ್ಫ್‌ಗೆ ಇಲ್ಲದಂತೆ ಮಾಡುವ ಪ್ರಯತ್ನವಾಗಿ ಕೇಂದ್ರ ಸರಕಾರ ವಕ್ಫ್ ತಿದ್ದುಪಡಿ ಮಸೂದೆ ಜಾರಿಗೆ ಮುಂದಾಗಿದೆ ಎಂದು ಆರೋಪಿಸಿದರು.
ಕೇಂದ್ರದ ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಜಾರಿಗೆ ತರುವುದಿಲ್ಲವೆಂದು ಈಗಾಗಲೇ ನೆರೆಯ ಕೇರಳ, ತಮಿಳುನಾಡು ರಾಜ್ಯಗಳು ತಿಳಿಸಿವೆ. ಅದೇ ರೀತಿ ಕರ್ನಾಟಕದ ಮುಖ್ಯಮಂತ್ರಿಗಳು ಕೂಡ ಅಲ್ಪಸಂಖ್ಯಾತರ ಹಿತಕಾಪಾಡಲಿದ್ದಾರೆ ಎಂದರು.
ಜಿಲ್ಲಾಧಿಕಾರಿಗಳಿಗೆ ಮನವಿ :
ಗಾಂಧಿ ಮೈದಾನದ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರ ಮೂಲಕ ಕೊಡಗು ಜಿಲ್ಲಾ ಸುನ್ನಿ ಸಮನ್ವಯ ಸಮಿತಿಯ ಪ್ರಮುಖರು ರಾಷ್ಟ್ರಪತಿಗಳಿಗೆ ಮನವಿ ಪತ್ರ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ಜಿಲ್ಲಾ ಉಲಮಾ ಅಧ್ಯಕ್ಷ ಕಿಲ್ಲೂರು ತಂಙಳ್, ಸುನ್ನಿ ಸಮನ್ವಯ ಸಮಿತಿಯ ಉಪಾಧ್ಯಕ್ಷರಾದ ಕೆ.ಎ.ಯಾಕುಬ್, ಪಿ.ಎಂ.ಲತೀಫ್, ಖಜಾಂಚಿ ಮಹಮ್ಮದ್ ಹಾಜಿ ಕುಂಜಿಲ, ಕಾರ್ಯದರ್ಶಿ ಉಮ್ಮರ್ ಫೈಝಿ, ಜಿಲ್ಲಾ ವಕ್ಫ್ ಮಂಡಳಿ ಮಾಜಿ ಅಧ್ಯಕ್ಷ ಎಂ.ಬಿ.ಹಮೀದ್, ಪಿ.ಎ.ಯೂಸುಫ್ ಹಾಜಿ ಎಮ್ಮೆಮಾಡು ಸೇರಿದಂತೆ ಮುಸ್ಲಿಂ ಸಮುದಾಯದ ಹಲವು ಪ್ರಮುಖರು ಪಾಲ್ಗೊಂಡಿದ್ದರು.