ಸೋಮವಾರಪೇಟೆ | ಲೋಕಾಯುಕ್ತ ಬಲೆಗೆ ಬಿದ್ದ ಗ್ರಾಪಂ ಅಧ್ಯಕ್ಷೆ; 25 ಸಾವಿರ ರೂ. ಲಂಚ ಪಡೆದ ಆರೋಪ

ಮಡಿಕೇರಿ, ಅ.8: ತುಂಡು ಕಾಮಗಾರಿ ಗುತ್ತಿಗೆದಾರನ ಬಿಲ್ ಮೊತ್ತ ಪಾವತಿಸಲು 25 ಸಾವಿರ ರೂ. ಲಂಚ ಪಡೆದ ಆರೋಪದಡಿ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಸಮೀಪದ ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ ಹಿರೇಶ್ ಎಂಬವರನ್ನು ಕೊಡಗು ಲೋಕಾಯುಕ್ತ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಶನಿವಾರಸಂತೆ ಹೋಬಳಿ ಒಡೆಯನಪುರ ಗ್ರಾಮ ನಿವಾಸಿ ಡಿ ದರ್ಜೆ ಗುತ್ತಿಗೆದಾರ ಹಮೀದ್ ಎಸ್.ಎ. ಎಂಬವರು ಹಂಡ್ಲಿ ಗ್ರಾಮ ಪಂಚಾಯತ್‌ನಲ್ಲಿ ಪಡೆದಿರುವ ತುಂಡು ಗುತ್ತಿಗೆ ಕಾಮಗಾರಿಗಳ ಮೇಲುಸ್ತುವಾರಿ ನೋಡಿಕೊಳ್ಳಲು ಹುಲುಸೆ ಗ್ರಾಮದ ಭರತ್ ಎಂಬವರನ್ನು ನೇಮಿಸಿಕೊಂಡಿದ್ದರು. 15ನೇ ಹಣಕಾಸು ಅನುದಾನದಡಿ 2 ಕಾಮಗಾರಿಗಳು ಹಾಗೂ ಇತರ 6 ಕಾಮಗಾರಿಗಳ ಒಟ್ಟು ಮೊತ್ತ 14,79,700 ರೂ. ಮಂಜೂರು ಮಾಡಲು ಹಂಡ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸುಧಾ ಹಿರೇಶ್ 25 ಸಾವಿರ ರೂ.ಗೆ ಬೇಡಿಕೆ ಇಟ್ಟಿದ್ದರು. ಈ ವಿಚಾರವನ್ನು ಗುತ್ತಿಗೆದಾರ ಹಮೀದ್ ಎಸ್.ಎ. ಅವರಿಗೆ ಭರತ್ ತಿಳಿಸಿದ ಸಂದರ್ಭ ಅಧ್ಯಕ್ಷರ ಮೇಲೆ ಲೋಕಾಯುಕ್ತಕ್ಕೆ ದೂರು ನೀಡುವಂತೆ ಹೇಳಿದ್ದರು.
ಅದರಂತೆ ಭರತ್ ಮಡಿಕೇರಿ ಲೋಕಾಯುಕ್ತ ಕಚೇರಿಗೆ ಆಗಮಿಸಿ ಹಂಡ್ಲಿ ಗ್ರಾಪಂ ಅಧ್ಯಕ್ಷೆ ಸುಧಾ ಹಿರೇಶ್ ವಿರುದ್ಧ ಹಣದ ಬೇಡಿಕೆ ಕುರಿತು ದೂರು ನೀಡಿದ್ದರು. ಅ.8ರಂದು ಹಂಡ್ಲಿ ಗ್ರಾಮ ಪಂಚಾಯತ್ ಕಚೇರಿಗೆ ಆಗಮಿಸಿದ ಭರತ್ ಅಧ್ಯಕ್ಷೆ ಸುಧಾ ಹಿರೇಶ್ ಅವರಿಗೆ 25 ಸಾವಿರ ರೂ.ಯನ್ನು ನೀಡಲು ಮುಂದಾದರು. ಈ ಸಂದರ್ಭ ಫೈಲ್ ಒಳಗೆ ಹಣ ಇಡಲು ಹೇಳಿದ ಕಾರಣಕ್ಕಾಗಿ ಹಣವನ್ನು ಫೈಲಿನಲ್ಲಿಟ್ಟ ನಂತರ ಪಡೆದುಕೊಂಡರು ಎಂದು ಆರೋಪಿಸಲಾಗಿದೆ. ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ ಲಂಚದ ಹಣದ ಸಹಿತ ಆರೋಪಿ ಪಂಚಾಯತ್ ಅಧ್ಯಕ್ಷೆ ಸುಧಾ ಹಿರೇಶ್ ಅವರನ್ನು ಬಂಧಿಸಿದ್ದಾರೆ.
ಲೋಕಾಯುಕ್ತ ಪೊಲೀಸ್ ಮಹಾ ನಿರೀಕ್ಷಕ ಸುಬ್ರಮಣೇಶ್ವರ ರಾವ್, ಮೈಸೂರು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಟಿ.ಜೆ.ಉದೇಶ್ ಮಾರ್ಗದರ್ಶನದಲ್ಲಿ ಮಡಿಕೇರಿ ಲೋಕಾಯುಕ್ತ ಡಿವೈಎಸ್ಪಿ ದಿನಕರ್ ಶೆಟ್ಟಿ, ಪೊಲೀಸ್ ನಿರೀಕ್ಷಕ ಲೋಕೇಶ್, ವೀಣಾ ನಾಯಕ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.







