ಮುಂದಿನ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಲು ಮಕ್ಕಳಿಗೆ ಸ್ವಾತಂತ್ರ್ಯ ನೀಡಬೇಕು: ಅತೀಖು ರೆಹಮಾನ್

ಮಡಿಕೇರಿ: ಪೋಷಕರು ತಮ್ಮ ಮಕ್ಕಳನ್ನು ಇಂತಹದೇ ವೃತ್ತಿಯನ್ನು ಆಯ್ಕೆ ಮಾಡಿಕೊಳ್ಳಬೇಕು ಎಂಬ ಧೋರಣೆಯನ್ನು ಬಿಡಬೇಕು. ಅವರ ಮುಂದಿನ ಭವಿಷ್ಯವನ್ನು ಆಯ್ಕೆ ಮಾಡಿಕೊಳ್ಳಲು ಅವರಿಗೆ ಸ್ವಾತಂತ್ರ ನೀಡಬೇಕು ಎಂದು ದಿಲ್ಲಿಯ ಖ್ಯಾತ ವ್ಯಕ್ತಿತ್ವ ವಿಕಸನ ತರಬೇತುದಾರರಾದ ಅತೀಖು ರೆಹಮಾನ್ ಸಲಹೆ ನೀಡಿದರು.
ಉಮ್ಮತ್ ಒನ್ ಕೊಡಗು ಹಾಗೂ ಕರ್ನಾಟಕದ ಖ್ಯಾತ ಶಿಕ್ಷಣ ಸಂಸ್ಥೆ ಶಾಹಿನ್ ಶಿಕ್ಷಾ ಯಾತ್ರೆ ವತಿಯಿಂದ ನಗರದ ಕಾವೇರಿ ಹಾಲ್ ಸಭಾಂಗಣದಲ್ಲಿ ವಿಧ್ಯಾರ್ಥಿಗಳಿಗಾಗಿ ನಡೆದ ವೃತ್ತಿ ತರಬೇತಿ ವ್ಯಕ್ತಿತ್ವ ವಿಕಸನ ಕಾರ್ಯಾಗಾರದಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳಲ್ಲಿ ವಿವಿಧ ರೀತಿಯ ಪ್ರತಿಭೆಗಳಿದೆ. ಅದರ ಬಗ್ಗೆ ಅರಿವಿಲ್ಲದೆ, ಪೋಷಕರು ತಮ್ಮ ಮಕ್ಕಳನ್ನು ಡಾಕ್ಟರ್ ಮತ್ತು ಇಂಜಿನಿಯರ್ ಹುದ್ದೆಗಳನ್ನು ಆಯ್ಕೆ ಮಾಡಲು ಪ್ರೋತ್ಸಾಹಿಸುತ್ತಿರುವುದು ಕಂಡು ಬರುತ್ತಿದೆ. ಇದು ಅವರಲ್ಲಿರುವ ಅಭಿರುಚಿಗಳಿಗೆ ವಿರುದ್ಧವಾಗಿದೆ. ಅಲ್ಲದೆ ಅವರ ಭವಿಷ್ಯದ ಮೇಲೆ ಇದು ಕೆಟ್ಟ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅತೀಖು ರೆಹಮಾನ್ ಅಭಿಪ್ರಾಯ ವ್ಯಕ್ತಪಡಿಸಿದರು.
ತಮ್ಮ ಸಹಪಾಠಿಗಳು ಯಾವುದನ್ನು ಆಯ್ಕೆ ಮಾಡಿಕೊಳ್ಳುತ್ತಾರೋ ಅದನ್ನೆ ನಾನು ಮಾಡುತ್ತೇನೆ ಎಂಬ ಧೋರಣೆಯನ್ನು ವಿದ್ಯಾರ್ಥಿಗಳು ಬಿಡಬೇಕು. ನಿಮ್ಮಲ್ಲಿರುವ ಅಭಿರುಚಿಗಳಿಗೆ ತಕ್ಕಂತೆ ನೀವು ಮುಂದುವರಿಯಬೇಕು ಎಂದು ಸಲಹೆ ನೀಡಿದರು.
ಸಲಹಾ ಸಮಿತಿ ಸದಸ್ಯ ಹಾರೂನ್ ಕಾರ್ಯಾಗಾರವನ್ನು ಉದ್ಘಾಟಿಸಿದರು. ಕೋಶಾಧಿಕಾರಿ ಸಿ.ಎಂ.ಹಮೀದ್ ಫೈಝಿ ಪ್ರಾಸ್ತವಿಕ ನುಡಿಗಳನ್ನಾಡಿದರು.
ಉಮ್ಮತ್ ಒನ್ ಕೊಡಗು ಅಧ್ಯಕ್ಷ ಎಂ.ಬಿ.ಬಶೀರ್ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಹಿನ್ ಸಂಸ್ಥೆ ನಿರ್ದೇಶಕರಾದ ಶಕನೂರು ಸಾಂಬಾರ್ಕರ್ ಪುಣೆ, ಶಾಹಿನ್ ಅಕಾಡಮಿ ಘಟಕದ ಮುಖ್ಯಸ್ಥ ಫೈಝೂನ್ ದಾವೀಸ್ ಹಾಗೂ ಉಮ್ಮತ್ ಒನ್ ಸಂಘನೆಯ ಪಧಾದಿಕಾರಿಗಳು, ಮಡಿಕೇರಿ ಹಾಗೂ ಜಿಲ್ಲೆಯ ವಿವಿಧ ಭಾಗಗಳ ಪದವಿಪೂರ್ವ ವಿದ್ಯಾರ್ಥಿಗಳು ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದರು. ಭಟ್ಕಲ್ ಮಸೀದಿ ಖತೀಬರಾದ ಅಲೀ ಮುಸ್ಲಿಯಾರ್ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ಖಾಲಿದ್ ಸ್ವಾಗತಿಸಿದರು.







