ಕೋಲಾರ: ಸಿಜೆಐ ಗವಾಯಿ ಮೇಲೆ ಶೂ ಎಸೆತ ಕೃತ್ಯ ಖಂಡಿಸಿ ಜಿಲ್ಲಾದ್ಯಂತ ಸ್ವಯಂಪ್ರೇರಿತ ಬಂದ್

ಕೋಲಾರ, ಅ.17: ಸುಪ್ರೀಂಕೋರ್ಟ್ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿಯವರನ್ನು ಗುರಿಯಾಗಿಸಿ ಶೂ ಎಸೆದ ಪ್ರಕರಣವನ್ನು ಖಂಡಿಸಿ ಕೋಲಾರ ಜಿಲ್ಲಾ ಜನಪರ ಸಂಘಟನೆಗಳ ಒಕ್ಕೂಟ ಕರೆ ನೀಡಿರುವ ಶುಕ್ರವಾರದ ಜಿಲ್ಲಾದ್ಯಂತ ಸ್ವಯಂ ಪ್ರೇರಿತ ಬಂದ್ ಗೆ ಉತ್ತಮ ಸ್ಪಂದನ ವ್ಯಕ್ತವಾಗಿದೆ.
ಇಂದು ಬೆಳಗ್ಗೆ 6 ಗಂಟೆಯಿಂದಲೇ ಜಿಲ್ಲೆಯ ಕೆಜಿಎಫ್, ಮುಳಬಾಗಿಲು, ಬಂಗಾರಪೇಟೆ, ಶ್ರೀನಿವಾಸಪುರ, ಮಾಲೂರು ಹಾಗೂ ಕೋಲಾರ ತಾಲ್ಲೂಕುಗಳಲ್ಲಿ ಸಾರ್ವಜನಿಕರು ಬಂದ್ ಗೆ ಪೂರ್ಣ ಪ್ರಮಾಣದಲ್ಲಿ ಬೆಂಬಲ ವ್ಯಕ್ತಪಡಿಸಿದ್ದಾರೆ.
ಬೆಳಗಿನಿಂದಲೇ ಬಸ್ ಸಂಚಾರ, ಆಟೋ ಮುಂತಾದ ವಾಹನ ಸಂಚಾರ ಸ್ತಬ್ಧಗೊಂಡಿದೆ. ಅಂಗಡಿ ಮುಂಗಟ್ಟುಗಳು ತೆರೆದಿಲ್ಲ.
ವಕೀಲ ರಾಕೇಶ್ ಕಿಶೋರ್ ಕೃತ್ಯವನ್ನು ಖಂಡಿಸಿ ಬಂದ್ ಬೆಂಬಲಿಗರು ಪ್ರತಿಭಟನಾ ಪ್ರದರ್ಶನ ನಡೆಸಿದರು.
ರೈತ ಮುಖಂಡ ಅಬ್ಬಿಣಿ ಶಿವಪ್ಪ, ದಸಂಸ ಬಂಗವಾದಿ ನಾರಾಯಣಪ್ಪ, ಟಿ.ವಿಜಯಕುಮಾರ್, ಬಿ.ಶ್ರೀರಂಗ, ಹಾರೋಹಳ್ಳಿ ರವಿ, ಚಂದ್ರಮೌಳಿ, ಸುಬ್ರಮಣಿ, ರಮಣ, ವಿಜಯ್ ಕೃಷ್ಣ, ಅನ್ವರ್ ಪಾಷಾ, ಸಲಾವುದ್ದೀನ್ ಬಾಬು, ವೇಮಗಲ್ ಚಂದ್ರಶೇಖರ್, ಈನೆಲ ಈಜಲ ವೆಂಕಟಾಚಲಪತಿ, ಕಿತ್ತಂಡೂರು ವೆಂಕಟರಾಮ್ ಮುಂತಾದವರು ಭಾಗವಹಿಸಿದ್ದರು.







