ಬಂಗಾರಪೇಟೆ | ಗ್ರಾಮೀಣ ಕುಡಿಯುವ ನೀರಿನ ಇಲಾಖೆ ಎಇಇಯಾಗಿ ಆನಂದ್ ಕುಮಾರ್ ಅಧಿಕಾರ ಸ್ವೀಕಾರ

ಬಂಗಾರಪೇಟೆ : ತಾಲೂಕು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಸಹಾಯಕ ಕಾರ್ಯಾಪಾಲಕ ಎಂಜಿನಿಯರ್ ಆಗಿ ಎನ್.ಆನಂದ್ ಕುಮಾರ್ ಅಧಿಕಾರ ವಹಿಸಿಕೊಂಡಿದ್ದಾರೆ.
ಕಳೆದ ಐದು ತಿಂಗಳಿಂದ ಖಾಲಿಯಾಗಿದ್ದ ಈ ಹುದ್ದೆಗೆ ಸಣ್ಣ ನೀರಾವರಿ ಇಲಾಖೆಯಿಂದ ತಾಲೂಕು ಗ್ರಾಮೀಣ ಕುಡಿಯುವ ನೀರು ಹಾಗೂ ನೈರ್ಮಲ್ಯ ಇಲಾಖೆಯ ಎಇಇ ಆಗಿ ವರ್ಗಾವಣೆಯಾಗಿ ಬಂದಿದ್ದು, ಇದುವರೆಗೂ ಪ್ರಭಾರ ಎಇಇ ಆಗಿದ್ದ ಮುಳಬಾಗಿಲು ತಾಲೂಕಿನ ಎಇಇ ಮುರಳಿ ಅವರಿಂದ ಅಧಿಕಾರ ವಹಿಸಿಕೊಂಡರು.
ಎನ್.ಆನಂದ್ ಕುಮಾರ್ ಅವರು, ಜಿಲ್ಲೆಯ ಸಣ್ಣ ನೀರಾವರಿ ಇಲಾಖೆಯಲ್ಲಿ ಕಿರಿಯ ಎಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ್ದರು. ಅನಂತರ ಎಇಇ ಆಗಿ ಮುಂಬಡ್ತಿ ಹೊಂದಿದ ಮೇಲೆ ರಾಮನಗರ ತಾಲೂಕಿನ ಸಣ್ಣ ನೀರಾವರಿ ಇಲಾಖೆಯ ಉಪವಿಭಾಗದಲ್ಲಿ ಎಇಇ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಕಳೆದ ಐದು ತಿಂಗಳ ಹಿಂದೆ ಇಲ್ಲಿನ ಎಇಇ ಆಗಿದ್ದ ಸೂರ‍್ಯಪ್ರಸಾದ್ ವಯೋನಿವೃತ್ತಿಯಾಗಿದ್ದರಿಂದ ಇದುವರೆಗೂ ಈ ಸ್ಥಾನವು ಖಾಲಿಯಾಗಿತ್ತು. ಬಂಗಾರಪೇಟೆ ಹಾಗೂ ಕೆಜಿಎಫ್ ಎರಡೂ ತಾಲೂಕುಗಳಿಗೆ ಒಂದೇ ಉಪವಿಭಾಗವಿದ್ದು, ಪ್ರಭಾರಿಯಾಗಿ ಮುಳಬಾಗಿಲು ತಾಲೂಕಿನ ಎಇಇ ಮುರಳಿ ಅವರಿಗೆ ಅಧಿಕಾರ ವಹಿಸಲಾಗಿತ್ತು.
ನೂತನ ಎಇಇ ಎನ್.ಆನಂದ್ ಕುಮಾರ್ ಮಾತನಾಡಿ, ಬಂಗಾರಪೇಟೆ ಹಾಗೂ ಕೆಜಿಎಫ್ ಎರಡೂ ತಾಲೂಕುಗಳಿಗೆ ಒಂದೇ ಉಪವಿಭಾಗವಿದ್ದು, ಈ ಎರಡು ತಾಲೂಕುಗಳಲ್ಲಿ ಬಾಕಿ ಇರುವ ಜಲಜೀವನ್ ಮಿಷನ್ ಕಾಮಗಾರಿಗಳನ್ನು ಸಂಪೂರ್ಣವಾಗಿ ಮುಗಿಸಲು ಸಂಬಂಧಪಟ್ಟಗುತ್ತಿಗೆದಾರರೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು. ಸದ್ಯಕ್ಕೆ ಈ ಎರಡು ತಾಲೂಕುಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲವಾಗಿದೆ. ಮುಂದಿನ ಬೇಸಿಗೆಯಲ್ಲಿ ಏನಾದರೂ ಕುಡಿಯುವ ನೀರಿನ ಸಮಸ್ಯೆ ಉಂಟಾದಲ್ಲಿ ಸ್ಥಳೀಯ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಹಾಗೂ ಇಲಾಖೆಯ ಮೇಲಾಧಿಕಾರಿಗಳ ಸಹಕಾರದಿಂದ ಸಮಸ್ಯೆಯನ್ನು ಬಗೆಹರಿಸಲು ಶ್ರಮಿಸಲಾಗುವುದೆಂದು ಹೇಳಿದರು.
ಜಿಲ್ಲಾ ಎಸ್ಸಿ, ಎಸ್ಠಿ ಗುತ್ತಿಗೆದಾರರ ಸಂಘದ ಅಧ್ಯಕ್ಷ ಮಾರ್ಜೇನಹಳ್ಳಿ ಬಾಬು, ಲೋಕೋಪಯೋಗಿ ಇಲಾಖೆಯ ಎಇಇ ರವಿ, ಉಪವಿಭಾಗದ ಎಂಜಿನಿಯರ್‌ಗಳಾದ ರಾಜಶೇಖರ್ ಹಿರೇಮಠ್, ಶೈಲಜಾ, ಅಭಿಲಾಶ್, ದೇವೇಗೌಡ, ಲಾವಣ್ಯ, ಸಿಬ್ಬಂದಿಯಾದ ಅನಿಲ್, ನಾಗರಾಜ್, ಶೋಭ, ನಟರಾಜ್ ಸೇರಿದಂತೆ ಹಲವು ಗುತ್ತಿಗೆದಾರರು ಸೇರಿದಂತೆ ಇತರರು ಇದ್ದರು.
ಬಂಗಾರಪೇಟೆ ಪಟ್ಟಣದ ಗ್ರಾಮೀಣ ಕುಡಿಯುವ ನೀರು ಹಾಗು ನೈರ್ಮಲ್ಯ ಇಲಾಖೆಯ ಎಇಇ ಆಗಿ ವರ್ಗಾವಣೆಯಾಗಿ ಬಂದ ಎನ್.ಆನಂದ್ ಕುಮಾರ್ ಅವರು ಅಧಿಕಾರ ವಹಿಸಿಕೊಂಡ ವೇಳೆ ಅಧಿಕಾರಿ ಸಿಬ್ಬಂದಿ ಸ್ವಾಗತಿಸಿದರು.







