ಪದವೀಧರರ ಸಮಸ್ಯೆಗಳಿಗೆ ಸ್ಪಂದಿಸದ ಜನಪ್ರತಿನಿಧಿಗಳು: ಪಕ್ಷೇತರ ಅಭ್ಯರ್ಥಿ ಬರೀದ್ ಆರೋಪ

ಕೋಲಾರ: ರಾಜ್ಯದಲ್ಲಿ ಪದವೀಧರರು ಹಾಗೂ ಶಿಕ್ಷಕರು ಹತ್ತು ಹಲವು ಸಮಸ್ಯೆಗಳನ್ನು ಎದುರಿಸುತ್ತಿದ್ದು, ವಿವಿಧ ಪಕ್ಷಗಳ ಚಿಹ್ನೆಯಡಿ ಗೆದ್ದ ಅಭ್ಯರ್ಥಿಗಳು ತಮ್ಮ ಮೂಲ ಉದ್ದೇಶ ಮರೆತು ಕೇವಲ ಪಕ್ಷಗಳಿಗೆ ಮಾತ್ರ ನಿಷ್ಠೆಯಿಂದಿದ್ದಾರೆ. ಮತ ನೀಡಿದವರಿಗೆ ನಿಷ್ಠರಾಗಿಲ್ಲ ಎಂದು ಅಗ್ನೇಯ ಪದವೀಧರರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಬರೀದ್ ವಾಗ್ದಾಳಿ ನಡೆಸಿದರು.
ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಬುದ್ಧಿವಂತರ ಚಾವಡಿ ಎಂದೇ ಕರೆಯಲ್ಪಡುವ ವಿಧಾನ ಪರಿಷತ್ನಲ್ಲಿ ಒಟ್ಟು 75 ಸದಸ್ಯರ ಪೈಕಿ ಶಿಕ್ಷಕರು ಹಾಗೂ ಪದವೀಧರರ ಕ್ಷೇತ್ರದಿಂದಲೇ 7 ಮಂದಿ ಇರುತ್ತಾರೆ. ಆದರೆ ಇತ್ತೀಚಿನ ದಿನಗಳಲ್ಲಿ ಪರಿಷತ್ನಲ್ಲಿ ಬಂಡವಾಳಶಾಹಿಗಳ ಹಾವಳಿ ಹೆಚ್ಚಾಗಿದ್ದು, ಹಣ ಹಾಕಿ ಹಣ ಮಾಡುವುದೇ ಇಂದಿನ ರಾಜಕೀಯವಾಗಿದೆ" ಎಂದು ಅಸಮಾಧಾನ ವ್ಯಕ್ತಪಡಿಸಿದರು.
"ಮತ ಪಡೆದು ಹೋದ ಮೇಲೆ ಪ್ರತಿನಿಧಿಗಳು ಮತ್ತೆ ಇತ್ತ ತಿರುಗಿ ನೋಡುವುದಿಲ್ಲ. ಸಮಸ್ಯೆಗಳನ್ನು ಆಲಿಸದೆ ಕೇವಲ ರಾಜಕೀಯ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಬದಲಾವಣೆ ಅಗತ್ಯವಿದ್ದು, ಪರಿಷತ್ನಲ್ಲಿ ಬಂಡವಾಳಶಾಹಿಗಳ ಪ್ರಾಬಲ್ಯ ತಡೆಯಬೇಕಿದೆ. ಎಸ್. ನಿಜಲಿಂಗಪ್ಪ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ ಆದರ್ಶಗಳನ್ನು ಮೈಗೂಡಿಸಿಕೊಂಡು ಈ ಚುನಾವಣೆಗೆ ಸ್ಪರ್ಧಿಸಿದ್ದೇನೆ" ಎಂದರು.
ಹೈಕಮಾಂಡ್ ಮತದಾರರೇ ಪ್ರಮುಖ:
"ನನಗೆ ಇತರೆ ರಾಜಕೀಯ ಪಕ್ಷಗಳಂತೆ ಯಾವುದೇ ಹೈಕಮಾಂಡ್ ಇಲ್ಲ. ಐದು ಜಿಲ್ಲೆಗಳ ಪದವೀಧರ ಮತದಾರರೇ ನನಗೆ ಹೈಕಮಾಂಡ್. ಜಿಲ್ಲಾವಾರು ಪದವೀಧರರ ಸಮಸ್ಯೆಗಳ ನಿವಾರಣೆಗೆ ವಿಶೇಷ ವೇದಿಕೆ ಸ್ಥಾಪನೆ ಮತ್ತು ಗ್ರಂಥಾಲಯಗಳ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತೇನೆ" ಎಂದು ಭರವಸೆ ನೀಡಿದರು.
ಖಾಸಗಿ ಶಿಕ್ಷಕರ ವೇತನ ಸಮಸ್ಯೆ ನಿವಾರಣೆಯೇ ಪ್ರಥಮ ಆದ್ಯತೆ:
"ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಶಿಕ್ಷಕರಿಗೆ ಕೇವಲ 10 ತಿಂಗಳ ವೇತನ ಮಾತ್ರ ನೀಡಲಾಗುತ್ತಿದೆ. ಕಾನೂನಿನಲ್ಲಿ ಪೂರ್ಣ 12 ತಿಂಗಳ ಸಂಬಳ ನೀಡಬೇಕೆಂದು ನಿಯಮವಿದ್ದರೂ ಅದು ಎಲ್ಲೂ ಕಾರ್ಯಗತವಾಗುತ್ತಿಲ್ಲ. ಈ ಪ್ರಮುಖ ಸಮಸ್ಯೆಯನ್ನು ಬಗೆಹರಿಸುವುದೇ ನನ್ನ ಮೊದಲ ಆದ್ಯತೆ" ಎಂದು ತಿಳಿಸಿದರು.
ತಾನು ಚಿಕ್ಕಬಳ್ಳಾಪುರ ಜಿಲ್ಲೆಯವನಾಗಿದ್ದು, ಹೈಕೋರ್ಟ್ ಹಾಗೂ ಅವಳಿ ಜಿಲ್ಲೆಗಳಲ್ಲಿ ವಕೀಲ ವೃತ್ತಿ ಮಾಡುತ್ತಿರುವುದಾಗಿ ತಿಳಿಸಿದ ಅವರು, "ಚುನಾವಣಾ ಕಣದಲ್ಲಿ ನನ್ನ ಕ್ರಮ ಸಂಖ್ಯೆ 10 ಆಗಿದ್ದು, ಜನರ ಸೇವೆಯೊಂದೇ ನನ್ನ ಪ್ರಮುಖ ಗುರಿಯಾಗಿದೆ" ಎಂದರು.
ಸುದ್ದಿಗೋಷ್ಠಿಯಲ್ಲಿ ಅಡ್ವೋಕೇಟ್ ಗಳಾದ ನವೀನ್, ಪ್ರಶಾಂತ್, ರಶೀದ್ ಹಾಗೂ ಮುಕ್ತಿಯಾರ್ ಉಪಸ್ಥಿತರಿದ್ದರು.






