ಭವಿಷ್ಯದಲ್ಲಿ ಎಲ್ಲಾ ಸೇತುವೆಗಳ ಕಾಮಗಾರಿಗಳನ್ನು ಕೇಂದ್ರ ಸರಕಾರದ ವೆಚ್ಚದಿಂದಲೇ ಕೈಗೊಳ್ಳಲಾಗುವುದು : ರೈಲ್ವೆ ರಾಜ್ಯ ಖಾತೆ ಸಚಿವ ವಿ.ಸೋಮಣ್ಣ

ಕೋಲಾರ :ಭವಿಷ್ಯದಲ್ಲಿ ಎಲ್ಲಾ ಸೇತುವೆಗಳ ಕಾಮಗಾರಿಗಳನ್ನು ಕೇಂದ್ರ ಸರ್ಕಾರದ ವೆಚ್ಚದಿಂದಲೇ ಕೈಗೊಳ್ಳಲಾಗುವುದು ಎಂದು ಕೇಂದ್ರ ರೈಲ್ವೇ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.
ಕೋಲಾರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ದೇಶದಲ್ಲಿ ಕಳೆದ 10 ವರ್ಷಗಳಲ್ಲಿ 13 ಸಾವಿರದ 200 ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ಅಭಿವೃದ್ದಿಪಡಿಸಲಾಗಿದೆ. ರಾಜ್ಯದಲ್ಲಿ 600ಕ್ಕೂ ಅಧಿಕ ರೈಲ್ವೇ ಸೇತುವೆಗಳನ್ನು ಏಳೆಂಟು ವರ್ಷಗಳಲ್ಲಿ ಅಭಿವೃದ್ಧಿ ಮಾಡಲಾಗಿದೆ. ತುಮಕೂರಿನಲ್ಲಿ 26 ಮೇಲ್ಸೇತುವೆ ಮತ್ತು ಕೆಳಸೇತುವೆಗಳನ್ನು ಪೂರ್ಣಗೊಳಿಸಲಾಗಿದೆ. ಕೋಲಾರದಲ್ಲೂ ಅಭಿವೃದ್ಧಿ ಪಡಿಸಲು ಕ್ರಮವಹಿಸಲಾಗುವುದು. ಕೋಲಾರ ಎರಡನೇ ತುಮಕೂರು ಆಗಲಿದೆ ಎಂದು ಭರವಸೆ ನೀಡಿದರು.
ಟೇಕಲ್ ನಲ್ಲಿ ನಿರ್ಮಿಸಿರುವ ರಸ್ತೆ ಮೇಲ್ಸೇತುವೆ ರಾಜ್ಯ ಸರ್ಕಾರದ ವೆಚ್ಚ ಹಂಚಿಕೆಯೊಂದಿಗೆ ನಿರ್ಮಿಸಲಾಗಿದೆ. ಬಂಗಾರಪೇಟೆ ರೈಲು ನಿಲ್ದಾಣಕ್ಕೆ ಹೊಸ ಎರಡನೇ ಪ್ರವೇಶ ದ್ವಾರವನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಮತ್ತು ಇಡೀ ನಿಲ್ದಾಣವನ್ನು 22 ಕೋಟಿ ರೂ. ವೆಚ್ಚದಲ್ಲಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. 2026 ರ ವೇಳೆಗೆ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ಅದೇ ರೀತಿ ಮಾಲೂರು ರೈಲು ನಿಲ್ದಾಣವನ್ನು 20 ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ. ಮಾರಿಕುಪ್ಪಂ–ಕುಪ್ಪಂ ರೈಲ್ವೆ ಯೋಜನೆ ಪ್ರಗತಿಯಲ್ಲಿದೆ. ಬಂಗಾರಪೇಟೆಯಲ್ಲಿ ವಂದೇ ಭಾರತ್ ರೈಲುಗಳ ನಿಲುಗಡೆ ನೀಡುವುದಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಕೋಲಾರದಲ್ಲಿ ಟೇಕಲ್ ಮೇಲ್ಸೇತುವೆ, ನವೀಕರಿಸಿದ ಉರಿಗಾಂ ಮತ್ತು ಕೋರಮಂಡಲ ಹಾಗೂ ಬಂಗಾರಪೇಟೆ ಟಿಕೆಟ್ ಕೌಂಟರ್ ಅನ್ನು ಲೋಕಾರ್ಪಣೆ ಮಾಡಲಾಗಿದೆ. ಇನ್ನೂ ಹೆಚ್ಚಿನ ರೈಲ್ವೇ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದರು.
ಕೆಜಿಎಫ್ ನಿಂದ ಬೆಂಗಳೂರಿಗೆ ತೆರಳುವ ರೈಲಿನಲ್ಲಿ ಜನಸಂದಣಿ ಹೆಚ್ಚಿದ್ದು, ಬೋಗಿಗಳನ್ನು ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುವುದು. ರಾಷ್ಟ್ರದ ಅಭಿವೃದ್ದಿಯಲ್ಲಿ ಕರ್ನಾಟಕವೂ ಸೇರಬೇಕು ಎಂಬುದು ನಮ್ಮಆಶಯವಾಗಿದೆ. ರಾಷ್ಟ್ರೀಯ ಹೆದ್ದಾರಿ ಮತ್ತು ರೈಲ್ವೇಗೆ ಆದ್ಯತೆ ನೀಡುವುದರಿಂದ ಹೆಚ್ಚಿನ ಅಭಿವೃದ್ಧಿ ಸಾಧ್ಯ. ಹೆಚ್ಚಿನ ಉದ್ಯೋಗ ಸೃಷ್ಟಿ ಸಾಧ್ಯವಾಗಲಿದೆ ಎಂದರು.







