ನ.28ರಿಂದ ಮಂಗಳೂರಿನಲ್ಲಿ ಜನನುಡಿ : ನವೀನ್ ಸೂರಿಂಜೆ

ಕೋಲಾರ : ‘ಯುವಜನರ ರಾಜಕಾರಣ; ದಿಕ್ಕು, ಭವಿಷ್ಯ, ಸವಾಲು ಎಂಬ ಪ್ರಧಾನ ಆಶಯದೊಂದಿಗೆ ನ.28 ಹಾಗೂ 29 ರಂದು ಮಂಗಳೂರಿನ ಬಲ್ಮಠದಲ್ಲಿರುವ ಕೆಟಿಸಿ ಕ್ಯಾಂಪಸ್‌ನಲ್ಲಿ ಜನನುಡಿ-2026’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಜನನುಡಿ ಸಂಘಟಕ ನವೀನ್ ಸೂರಿಂಜೆ ತಿಳಿಸಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪೋಸ್ಟರ್ ಬಿಡುಗಡೆ ಮಾಡಿ ಮಾತನಾಡಿದ ಅವರು, ನ.28 ರಂದು ಬೆಳಿಗ್ಗೆ 9 ಗಂಟೆಗೆ ಪುಸ್ತಕ ಮೇಳ ಉದ್ಘಾಟನೆಯೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಹೋರಾಟಗಾರ ಬಸವರಾಜ ಸೂಳಿಭಾವಿ ಚಾಲನೆ ನೀಡಲಿದ್ದಾರೆ. ಬೆಳಗ್ಗೆ 10 ಗಂಟೆಗೆ ಜನನುಡಿ ಉದ್ಘಾಟನಾ ಗೋಷ್ಠಿ ಆರಂಭವಾಗಲಿದ್ದು, ಪ್ರೊ.ರಹಮತ್ ತರೀಕೆರೆ ಉದ್ಘಾಟಿಸಲಿದ್ದಾರೆ. ದಿಲ್ಲಿ ವಿದ್ಯಾರ್ಥಿ ಚಳವಳಿಯ ಪ್ರತಿನಿಧಿ ಶರಣ್ಯ ವರ್ಮ, ನಿವೃತ್ತ ಐಎಎಸ್ ಅಧಿಕಾರಿ ಎ.ಬಿ.ಇಬ್ರಾಹೀಂ ಮಾತನಾಡುವರು. ಮೂಡ್ನಾಕೂಡು ಚಿನ್ನಸ್ವಾಮಿ ಅಧ್ಯಕ್ಷತೆ ವಹಿಸಲಿದ್ದಾರೆ. ಅಂದು ಸಂಜೆ 5.30ಕ್ಕೆ ಬಹುಭಾಷಾ ನಟ ಪ್ರಕಾಶ್ ರೈ ಜೊತೆ ಸಂವಾದ ನಡೆಯಲಿದ್ದು, ನಾಗೇಗೌಡ ಕೆ.ಎಸ್. ಮಾತುಕತೆ ನಡೆಸಿಕೊಡಲಿದ್ದಾರೆ ಎಂದು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ಗಾಯಕ, ಸಾರಂಗ ರಂಗದ ಪಿಚ್ಚಳ್ಳಿ ಶ್ರೀನಿವಾಸ್, ಆದಿಮ ಹ.ಮಾ.ರಾಮಚಂದ್ರ, ಜನವಾದಿ ಮಹಿಳಾ ಸಂಘಟನೆಯ ವಿ.ಗೀತಾ, ಪತ್ರಕರ್ತ ಕೆ.ಎಸ್.ಗಣೇಶ್, ಸಮುದಾಯದ ಪ್ರತಿನಿಧಿಗಳು ಉಪಸ್ಥಿತರಿದ್ದರು.




