ನೀರಿಗಾಗಿ 2ನೇ ಸ್ವಾತಂತ್ರ್ಯ ಸಂಗ್ರಾಮ ಖಚಿತ : ನ್ಯಾ.ವಿ.ಗೋಪಾಲಗೌಡ

ಕೋಲಾರ : ಬಯಲು ಸೀಮೆಯ ಜನರು ಸ್ವಾತಂತ್ರ್ಯದ ನಂತರವೂ ಕುಡಿಯುವ ನೀರಿನ ಕೊರತೆಯಿಂದ ನರಳಾಡುತ್ತಿದ್ದಾರೆ. ಸುಮಾರು 3 ದಶಕಗಳ ಹೋರಾಟಕ್ಕೆ ಪ್ರತಿಫಲ ಸಿಕ್ಕಿಲ್ಲ. ಕುಡಿಯುವ ನೀರಿಗಾಗಿ ಅಂಗಲಾಚುವ ಪರಿಸ್ಥಿತಿ ಎದುರಾಗಿದ್ದು, ನೀರಿಗಾಗಿ 2ನೇ ಸ್ವಾತಂತ್ರ್ಯ ಸಂಗ್ರಾಮ ನಡೆಸುವುದು ಖಚಿತ. ಬಯಲು ಸೀಮೆಯ ಜನ ಜನಾಂದೋಲನಕ್ಕೆ ಧುಮುಕಬೇಕು ಎಂದು ಸುಪ್ರೀಂಕೋರ್ಟ್‌ನ ವಿಶ್ರಾಂತ ನ್ಯಾಯಮೂರ್ತಿ ಜಸ್ಟೀಸ್ ವಿ.ಗೋಪಾಲಗೌಡ ಕರೆ ನೀಡಿದ್ದಾರೆ.
ನಗರದಲ್ಲಿ ಶನಿವಾರ ಜಲಾಗ್ರಹ ಜಂಟಿ ಕ್ರಿಯಾ ಸಮಿತಿ ಹಮ್ಮಿಕೊಂಡಿದ್ದ ಕೃಷ್ಣಾ ನದಿ ನೀರಿಗಾಗಿ ತೆಲಂಗಾಣ ಮಾದರಿ ಜಲಾಗ್ರಹ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕುಡಿಯುವ ನೀರಿನ ಸಮಸ್ಯೆಗಳ ಬಗ್ಗೆ ಸರಕಾರಗಳಿಗೆ ಅರಿವು ಇದ್ದರೂ ನಿರ್ಲಕ್ಷಿಸುತ್ತಿವೆ. ನ್ಯಾಯಕ್ಕಾಗಿ ಹೋರಾಟ ನಡೆಯುತ್ತಿದ್ದು ಕೊನೆ ಉಸಿರು ಇರುವ ತನಕ ನಾಯಕತ್ವ ವಹಿಸುತ್ತೇನೆ ಎಂದರು.
ಕುಡಿಯುವ ನೀರು ಕೊಡಿ ಅಂತ ಬೇಡಿಕೆ ಇಡುತ್ತಿಲ್ಲ, ಇದು ರಾಜ್ಯ, ಕೇಂದ್ರ ಸರಕಾರವನ್ನು ಒತ್ತಾಯಿಸಲಾಗುತ್ತಿದೆ. ಜನ ರಾಜಕೀಯ ನಾಯಕರನ್ನು ಆಯ್ಕೆ ಮಾಡಿ ಕಳುಹಿಸಿದ್ದು, ಮತ್ತೆ ಮತ್ತೆ ಕೇಳಲು ಬಂದರೆ ಸಾಧನೆಯ ಬಗ್ಗೆ ಪ್ರಶ್ನಿಸಬೇಕು . ಕುಗ್ರಾಮಗಳ ಜನರಿಗೆ ನೀರು, ಶಿಕ್ಷಣ, ಆರೋಗ್ಯ, ಉದ್ಯೋಗ ನೀಡಿದರೆ ಉತ್ತಮ ಆಡಳಿತ ಎನ್ನಬಹುದು. ಆದರೆ ಜನರಿಂದ ಆಯ್ಕೆಯಾಗಿ ಹೋಗಿ ಐಷಾರಾಮಿ ಜೀವನ ನಡೆಸುತ್ತಿದ್ದರೆ, ಇದು ಆಡಳಿತನಾ ಎಂದು ಕಿಡಿಕಾರಿದರು.
ಸರಕಾರದ ನಾಯಕರು ನಿಸರ್ಗವನ್ನು ಹಾಳು ಮಾಡಿದ್ದಾರೆ. ಬೆಂಗಳೂರಿಗೆ ನೀರು ಹರಿಸಲು ಬಿಡಬ್ಲ್ಯೂಎಸ್‌ಎಸ್‌ಬಿ, ಜಿಲ್ಲೆಗೊಂದು ಪ್ರತ್ಯೇಕ ಬೋರ್ಡ್ ಇದ್ದು ವ್ಯವಸ್ಥಾಪಕ, ಅಧ್ಯಕ್ಷರ ನೇಮಕ ಆಗಿದೆ. ಆದರೆ ಅವರು ಅಪಾರ್ಟ್‌ಮೆಂರ್ಟ್, ಎಸಿ ರೂಂನಲ್ಲಿ ಜೀವಿಸುವವರಿಗೆ ನೀರು ಹರಿಸುತ್ತಿದ್ದಾರೆಯೇ ಹೊರತು ಬಯಲು ಸೀಮೆ ಜನರಿಗಲ್ಲ. ಮಾನವೀಯ ವಿಜ್ಞಾನಿಗಳು ರೈತರು. ಸರಕಾರಗಳ ಗಮನ ಸೆಳೆಯುತ್ತಿರುವ ಸಮಾವೇಶ ಇದಾಗಿದ್ದು, ಆಡಳಿತ ನಡೆಸುವ ಅವಧಿ ಮುಗಿಯುತ್ತಿದ್ದು, ಅನ್ನದಾತರು ಸರಕಾರ ನಡೆಸುವ ಜಾಗಕ್ಕೆ ಬಂದು ಕಲಾಪ ನಿಲ್ಲಿಸಬೇಕಾಗುತ್ತದೆ ಎಂದರು.
ಸಂಸದ ಎಂ.ಮಲ್ಲೇಶ್‌ಬಾಬು, ಚಿಕ್ಕಬಳ್ಳಾಪುರ ಶಾಶ್ವತ ನೀರಾವರಿ ಹೋರಾಟ ವೇದಿಕೆ ಅಧ್ಯಕ್ಷ ಆಂಜನೇಯ ರೆಡ್ಡಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಮಾಜಿ ಶಾಸಕ ವೈ.ಸಂಪಂಗಿ, ಒಕ್ಕಲಿಗರ ಸಂಘದ ನಿರ್ದೇಶಕ ಡಾ.ಡಿ.ಕೆ.ರಮೇಶ್, ವಕೀಲ ಕೆ.ವಿ.ಶಂಕರಪ್ಪ, ಬೀಸಪ್ಪಗೌಡ, ವಿವಿಧ ಪಕ್ಷಗಳ ಮುಖಂಡರಾದ ತೂಪಲ್ಲಿ ನಾರಾಯಣಸ್ವಾಮಿ, ಅಲಂಗೂರು ಶಿವಣ್ಣ, ಓಂಶಕ್ತಿ ಚಲಪತಿ, ಡಾ.ರಮೇಶ್ ಬಾಬು, ಹೂಡಿ ವಿಜಯಕುಮಾರ್, ಮೇಡಿಹಾಳ ರಾಘವೇಂದ್ರ, ಉಷಾ, ಇಂದಿರಾ ರೆಡ್ಡಿ, ಬಿ.ವಿ.ಮಹೇಶ್, ಹೊಳಲಿ ಪ್ರಕಾಶ್, ಸಂಚಾಲಕ ಅನ್ನದಾನಿ, ವಸಂತ ಕವಿತಾ, ವಿ.ಕೆ.ರಾಜೇಶ್, ಸಿ.ವಿ.ನಾಗರಾಜ್, ರೈತ ಸಂಘದ ಅಬ್ಬಿಣಿ ಶಿವಪ್ಪ, ರಾಮು ಶಿವಣ್ಣ, ಕುರುಬರಪೇಟೆ ವೆಂಕಟೇಶ್, ಕನ್ನಡ ಮಿತ್ರ ವೆಂಕಟಪ್ಪ, ಮಾನವ ಹಕ್ಕುಗಳ ಹೋರಾಟಗಾರ ಸಂತೋಷ್, ನಾರಾಯಣಸ್ವಾಮಿ, ಚಂಬೆ ರಾಜೇಶ್, ಪತ್ರಕರ್ತರ ಸಂಘದ ಜಿಲ್ಲಾ ಅಧ್ಯಕ್ಷ ಎಸ್.ಕೆ.ಚಂದ್ರಶೇಖರ್ ಉಪಸ್ಥಿತರಿದ್ದರು. ಕೊಂಡರಾಜನಹಳ್ಳಿ ಮಂಜುಳ ನಿರೂಪಿಸಿದರು, ಜಾನಪದ ಹುಂಜ ಮುನಿರೆಡ್ಡಿ ಮತ್ತು ಸಂಗಡಿಗರಿಂದ ಹೋರಾಟದ ಹಾಡುಗಳು ಹಾಡಿದರು.
ನೀರಿಗಾಗಿ ಎರಡನೇ ಸ್ವಾತಂತ್ರ್ಯ ಸಂಗ್ರಾಮ ನಡೆಯಲಿದೆ. ನೀರು ಕೊಡದ ಸರಕಾರಗಳ ಮೇಲೆ ನಷ್ಟ ಪರಿಹಾರ ಹಾಕಲು ಅವಕಾಶವಿದೆ. ಹೋರಾಟದ ಮೂಲಕ ನೀರು ಕೊಡಿ ಅಂತ ಕೇಳಿದಕ್ಕೆ ತ್ಯಾಜ್ಯ ನೀರನ್ನು ಹರಿಸಿದ್ದಾರೆ. ಅನ್ನದಾತರು ನಾಯಕರಾಗಬೇಕಾಗಿದೆ. ಸರಕಾರದ ನೀತಿ, ಯೋಜನೆಗಳು ಏನಿದ್ದರೂ ಔಷಧಿ, ಬೀಜ ಕಂಪೆನಿಗಳನ್ನು ಉದ್ಧಾರ ಮಾಡುವುದು ಅಷ್ಟೇ. ವೇಮಗಲ್, ನರಾಸಪುರದಲ್ಲಿ ಭಾಗಕ್ಕೆ ಕೃಷಿ ಕಾರ್ಮಿಕರನ್ನು, ರೈತರನ್ನು ರಕ್ಷಣೆ ಮಾಡುವ ಕೈಗಾರಿಕೆಗಳು ಬರಲಿಲ್ಲ. ರೈತರ ಜಮೀನುಗಳನ್ನು ಕಸಿದುಕೊಂಡು ಜಪಾನ್, ಆಸ್ಟ್ರೆಲಿಯಾದಿಂದ ಕಂಪೆನಿಗಳನ್ನು ಕರೆತರಲಾಗಿದೆ. ಸಣ್ಣ ನೀರಾವರಿ ಸಚಿವ ಚುನಾಯಿತರಲ್ಲ, ನಾಮಿನಿ ಎಂಎಲ್ಸಿ, ಆದರೆ ಸಮಸ್ಯೆಗಳು ಅಲಿಸಲು ಎಂದೂ ಬಯಲು ಸೀಮೆ ಜಿಲ್ಲೆಗಳಿಗೆ ಬಂದಿಲ್ಲ.
- ಜಸ್ಟೀಸ್ ವಿ. ಗೋಪಾಲಗೌಡ, ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಾಧೀಶರು







