Kolar | ಕೆರೆಗೆ ಬಿದ್ದ ಕಾರು; ರೈತ ಸಂಘದ ಜಿಲ್ಲಾಧ್ಯಕ್ಷ ಮೃತ್ಯು

ಕೋಲಾರ : ಚಲಿಸುತ್ತಿದ್ದ ಕಾರು ಕೆರೆಗೆ ಬಿದ್ದ ಪರಿಣಾಮ ಕಾರಿನಲ್ಲಿದ್ದ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಹಾಗೂ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಕಾರ್ಯದರ್ಶಿ ಟಿ.ಎಂ.ವೆಂಕಟೇಶ್ ಮೃತಪಟ್ಟಿದ್ದಾರೆ.
ಶನಿವಾರ ರಾತ್ರಿ ಕೋಲಾರದಿಂದ ವಾಪಸ್ ಮನೆಗೆ ಹೋಗುವಾಗ ಆಕಸ್ಮಿಕವಾಗಿ ಕಾರು ಕೆರೆಗೆ ಬಿದ್ದಿದೆ ಎನ್ನಲಾಗಿದೆ.
ಮಾರ್ಚ್ 9,10,11ರಂದು ಕೋಲಾರದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ 18ನೇ ರಾಜ್ಯ ಸಮ್ಮೇಳನ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಜಿಲ್ಲಾಧ್ಯಕ್ಷ ಟಿ.ಎಂ.ವೆಂಕಟೇಶ್ ಕಳೆದ ಒಂದು ವಾರದಿಂದ ನಿರಂತರವಾಗಿ ತಯಾರಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು, ಮಾರ್ಚ್ 7ರಂದು ರಾತ್ರಿ 12 ಗಂಟೆಯವರೆಗೂ ರಾಜ್ಯ ಸಮ್ಮೇಳನದ ಕೆಲಸಗಳನ್ನು ಮಾಡಿ 12-45 ರ ಸಮಯದಲ್ಲಿ ತಮ್ಮ ಸ್ವಗ್ರಾಮ ತೆರಳುವ ಮಾರ್ಗ ಮಧ್ಯೆ ಈ ಅಪಘಾತ ಸಂಭವಿಸಿದೆ.
ಮೃತ ದೇಹವನ್ನು ಕೋಲಾರ ಎಸ್‌ಎನ್‌ಆರ್ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮಾಡಿದ ನಂತರ ಅವರ ಅಂತ್ಯಕ್ರಿಯೆ ಸಂಜೆ ವೇಳೆಗೆ ಸ್ವಗ್ರಾಮ ತೂರಂಡಹಳ್ಳಿಯಲ್ಲಿ ನೆರವೇರಿತು.
ಇವರ ನಿಧನಕ್ಕೆ ಕಮ್ಯುನಿಸ್ಟ್ ಪಕ್ಷದ ಜಿಲ್ಲಾ ಮುಖಂಡರಾದ ಸೂರ್ಯನಾರಾಯಣ, ಗಾಂಧೀನಗರ ನಾರಾಯಣಸ್ವಾಮಿ, ವಿ.ಗೀತಾ, ಕೆಜಿಎಫ್ ತಂಗರಾಜ್, ಶ್ರೀನಿವಾಸನ್, ವಿಜಯಕೃಷ್ಣ, ನವೀನ್ ಪಾತಕೋಟೆ ಸೇರಿದಂತೆ ಜಿಲ್ಲೆಯ ರೈತ ಮುಖಂಡರು, ದಲಿತ ಮುಖಂಡರು ಸಂತಾಪ ವ್ಯಕ್ತಪಡಿಸಿದ್ದಾರೆ.





