Kolar | ಅಕ್ರಮ ಕಲ್ಲು ಕ್ವಾರಿ ದಾರಿ ವಿವಾದ: ಯುವ ರೈತನ ಹತ್ಯೆ

ಕೋಲಾರ/ಮಾಲೂರು : ಅಕ್ರಮ ಕಲ್ಲು ಗಣಿಗಾರಿಕೆಗೆ ದಾರಿ ಬಿಟ್ಟುಕೊಡಲಿಲ್ಲ ಎಂಬ ಕ್ಷುಲ್ಲಕ ಕಾರಣಕ್ಕೆ ಯುವ ರೈತನೊಬ್ಬನನ್ನು ಚಾಕುವಿನಿಂದ ಇರಿದು ಹತ್ಯೆ ಮಾಡಿರುವ ಘಟನೆ ಮಾಲೂರು ತಾಲೂಕಿನ ಮಾಸ್ತಿ ಪೊಲೀಸ್ ಠಾಣೆ ವ್ಯಾಪ್ತಿಯ ದೇವರಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಮೃತ ರೈತನನ್ನು ದೇವರಹಳ್ಳಿ ಗ್ರಾಮದ ಮುರಳಿ (30)ಎಂದು ಗುರುತಿಸಲಾಗಿದೆ. ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ಐವರು ಅಣ್ಣ-ತಮ್ಮಂದಿರಾದ ಅಶೋಕ್, ಮುನಿರಾಜು, ಸುರೇಶ್, ರಾಜೇಶ್ ಹಾಗೂ ಮತ್ತೊಬ್ಬ ಹಿರಿಯಣ್ಣ ಸೇರಿ ಮುರಳಿ ಅವರ ಮೇಲೆ ಚಾಕುವಿನಿಂದ ಮಾರಣಾಂತಿಕ ದಾಳಿ ನಡೆಸಿದ್ದಾರೆ. ತೀವ್ರವಾಗಿ ಗಾಯಗೊಂಡ ಮುರಳಿ ಅವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಮೃತಪಟ್ಟಿದ್ದಾರೆ.
ಘಟನೆಯ ವಿವರ: ದೇವರಹಳ್ಳಿ ಗ್ರಾಮದ ಪಕ್ಕದಲ್ಲಿರುವ ಬಂಡೆಯೊಂದರಲ್ಲಿ ಹಲವು ದಿನಗಳಿಂದ ಅಕ್ರಮ ಕಲ್ಲು ಗಣಿಗಾರಿಕೆ ನಡೆಯುತ್ತಿತ್ತು. ಕ್ವಾರಿಗೆ ತೆರಳಲು ಸೂಕ್ತ ರಸ್ತೆ ಇಲ್ಲದಿದ್ದ ಕಾರಣ, ಅಕ್ರಮ ಗಣಿ ದಂಧೆಕೋರರು ಮುರಳಿ ಅವರ ಕೃಷಿ ಹೊಲದಲ್ಲೇ ಅಕ್ರಮವಾಗಿ ರಸ್ತೆ ನಿರ್ಮಿಸಿಕೊಂಡು ಕಲ್ಲು ಸಾಗಿಸುತ್ತಿದ್ದರು. ಇದನ್ನು ಮುರಳಿ ಹಾಗೂ ಅವರ ಕುಟುಂಬ ತೀವ್ರವಾಗಿ ವಿರೋಧಿಸಿತ್ತು.
ಅಕ್ರಮ ಗಣಿಗಾರಿಕೆ ಮತ್ತು ದಾರಿ ವಿವಾದದ ಕುರಿತು ಮುರಳಿ ಅವರು ಮುಂಚಿತವಾಗಿಯೇ ಮಾಸ್ತಿ ಪೊಲೀಸರಿಗೆ ದೂರು ನೀಡಿದ್ದರೂ ಯಾವುದೇ ಸೂಕ್ತ ಕ್ರಮ ಕೈಗೊಂಡಿರಲಿಲ್ಲ. ಪೊಲೀಸರ ನಿರ್ಲಕ್ಷ್ಯ ಹಾಗೂ ಅಕ್ರಮ ಗಣಿ ದಂಧೆಕೋರರೊಂದಿಗೆ ಅಧಿಕಾರಿಗಳು ಶಾಮೀಲಾಗಿರುವುದೇ ಈ ಕೊಲೆಗೆ ನೇರ ಕಾರಣ ಎಂದು ಮೃತನ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಆರೋಪಿಸಿದ್ದಾರೆ.
ಮಾಸ್ತಿ ಸಿಪಿಐ ಅಮಾನತಿಗೆ ಆಗ್ರಹ: ಅಕ್ರಮ ಗಣಿಗಾರಿಕೆಗೆ ಪ್ರೋತ್ಸಾಹ ನೀಡುತ್ತಿರುವ ಮಾಸ್ತಿ ಸಿಪಿಐ ಓಂಪ್ರಕಾಶ್ ಗೌಡ ಅವರನ್ನು ಕೂಡಲೇ ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.
ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ಮುಗಿದ ಬಳಿಕ ಮೃತದೇಹವನ್ನು ಮಾಸ್ತಿ ಪೊಲೀಸ್ ಠಾಣೆ ಎದುರು ಇಟ್ಟು ಪ್ರತಿಭಟಿಸಲು ಮೆರವಣಿಗೆ ಹೊರಟಾಗ,ಓಬಟ್ಟಿ ಗ್ರಾಮದ ಬಳಿ ಪೊಲೀಸರು ತಡೆದರು. ಇದರಿಂದ ವಿವಿಧ ಸಂಘಟನೆಗಳ ಮುಖಂಡರು ಮತ್ತು ಸಾರ್ವಜನಿಕರು ರಸ್ತೆಯಲ್ಲೇ ಕುಳಿತು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಅಧಿಕಾರಿಗಳ ಭರವಸೆ: ಸ್ಥಳಕ್ಕೆ ಆಗಮಿಸಿದ ಹಿರಿಯ ಪೊಲೀಸ್ ಅಧಿಕಾರಿಗಳು, ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆಯನ್ನು ಹಿಂಪಡೆಯಲಾಯಿತು.






