ಕೋಲಾರ: ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ವತಿಯಿಂದ ವಾರ್ಷಿಕ ಪ್ರತಿಭಾ ಪುರಸ್ಕಾರ, ಬಹುಮಾನ ವಿತರಣಾ ಸಮಾರಂಭ

ಕೋಲಾರ, ಜುಲೈ 27: "ಜ್ಞಾನದ ಅತ್ಯಂತ ಮುಖ್ಯ ಉದ್ದೇಶ ದೇವರ ಪರಿಚಯ ಮತ್ತು ಆತನ ಏಕತ್ವವನ್ನು ಅರಿಯುವುದಾಗಿದೆ. ಇಸ್ಲಾಂ ಧರ್ಮವು ಜ್ಞಾನವನ್ನು ಪಡೆಯುವುದನ್ನು ಮತ್ತು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದನ್ನು ಶ್ರೇಷ್ಠ ಆರಾಧನೆ ಎಂದು ಪರಿಗಣಿಸುತ್ತದೆ" ಎಂದು ಬಿಐಇ ಕರ್ನಾಟಕ ರಾಜ್ಯ ಕಾರ್ಯದರ್ಶಿ ರಿಯಾಝ್ ಅಹ್ಮದ್ ರೋಣ ಅವರು ಅಭಿಪ್ರಾಯಪಟ್ಟರು.
ಕೋಲಾರ ನಗರದ ಎಂ.ಪಿ. ಪ್ಲಾಜಾ ಸಭಾಂಗಣದಲ್ಲಿ ರವಿವಾರ ಬೋರ್ಡ್ ಆಫ್ ಇಸ್ಲಾಮಿಕ್ ಎಜುಕೇಶನ್ ಕೋಲಾರ ವತಿಯಿಂದ ಆಯೋಜಿಸಲಾಗಿದ್ದ ವಾರ್ಷಿಕ ಪ್ರಮಾಣಪತ್ರ ಹಾಗೂ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು.
ಬೋರ್ಡ್‌ನ ರಾಜ್ಯ ಕಾರ್ಯಕಾರಣಿ ಸದಸ್ಯರಾದ ಸದರುಲ್ಲಾ ಖಾನ್ ಮಾತನಾಡಿ, "ವಿದ್ಯಾರ್ಥಿಗಳು ಜೀವನಪೂರ್ತಿ ಜ್ಞಾನವನ್ನು ಸಂಪಾದಿಸುತ್ತಲೇ ಇರಬೇಕು. ನಮ್ಮ ಪೂರ್ವಜರು ಜ್ಞಾನವನ್ನು ಅಲ್ಲಾಹನ ಸಾಮೀಪ್ಯ ಪಡೆಯುವ ಅತ್ಯುತ್ತಮ ಐಚ್ಛಿಕ ಆರಾಧನೆ ಎಂದು ಪರಿಗಣಿಸುತ್ತಿದ್ದರು" ಎಂದರು.
ಮತ್ತೊಬ್ಬ ಅತಿಥಿ ಡಾ. ಮಹಬೂಬ್ ಪಾಷಾ ಮಾತನಾಡಿ, "ಉದ್ದೇಶಪೂರ್ಣ ಜೀವನವು ವಿದ್ಯಾರ್ಥಿಗಳಲ್ಲಿ ಶಿಸ್ತನ್ನು ಮೂಡಿಸುತ್ತದೆ" ಎಂದು ಹೇಳಿದರು. ಈ ಸಂದರ್ಭದಲ್ಲಿ ಅವರು ಬೋರ್ಡ್‌ನ ಈ ಪ್ರಯತ್ನಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.
ಬೋರ್ಡ್‌ನ ಸ್ಥಳೀಯ ಸಂಚಾಲಕ ಮುಝಮ್ಮಿಲ್ ಅವರು ವಿದ್ಯಾರ್ಥಿಗಳ ಬಹುಮಾನಗಳನ್ನು ಘೋಷಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಟ್ಟದಲ್ಲಿ ಶ್ರೇಯಾಂಕ ಪಡೆದ ವಿದ್ಯಾರ್ಥಿನಿ ಮತ್ತು ಸ್ಥಳೀಯ ಮಟ್ಟದಲ್ಲಿ ಉತ್ತಮ ಸಾಧನೆ ಮಾಡಿದ ಎಲ್ಲಾ ವಿದ್ಯಾರ್ಥಿಗಳಿಗೆ ಮೆರಿಟ್ ಕಾರ್ಡ್, ಪ್ರಮಾಣಪತ್ರಗಳು ಮತ್ತು ಬಹುಮಾನಗಳನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕೋಲಾರ್ ಮತ್ತು ಚಿಕ್ಕಬಳ್ಳಾಪುರ ದ್ವಿಜಿಲ್ಲಾ ಸಂಚಾಲಕ ಸೈಯದ್ ರೂಹುಲ್ಲಾ, ಸ್ಥಳೀಯ ಅಧ್ಯಕ್ಷ ಅಜ್ಮಲ್ ಕದೀರ್ ಅವರ ಜೊತೆಗೆ ನಗರದ ಗಣ್ಯರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಜ.ಇ. ಹಿಂದ್ ದ್ವಿಜಿಲ್ಲಾ ಸಹಾಯಕ ಸಂಚಾಲಕ ಅಮ್ಜದ್ ಅಲಿ ಸ್ವಾಗತಿಸಿದರು. ಶೌಕತ್ ನಿರೂಪಿಸಿದರು.






