Kolar | ಕುಟುಂಬದ ಮೇಲೆ ಮಾರಣಾಂತಿಕ ಹಲ್ಲೆ ಆರೋಪ : ನಾಲ್ವರು ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹ
ಪ್ರಕರಣ ದಾಖಲು

ಕೋಲಾರ : ಪ್ರೇಮ ವಿವಾಹದ ವಿಚಾರವಾಗಿ ದ್ವೇಷ ಸಾಧಿಸಿ ಕುಟುಂಬದ ಸದಸ್ಯರ ಮೇಲೆ ರಾಡ್, ಹಾಗೂ ದೊಣ್ಣೆಗಳಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಕೋಲಾರ ತಾಲೂಕಿನ ಮದನಹಳ್ಳಿ ಗ್ರಾಮದಲ್ಲಿ ನಡೆದಿರುವುದು ವರದಿಯಾಗಿದೆ.
ಹಲ್ಲೆಗೆ ಒಳಗಾದ ಚಂದ್ರ, ಸಂದೀಪ್ ಶಿವಪ್ಪ ಮತ್ತು ಶ್ರೀನಿವಾಸ ಅವರು ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸಂತ್ರಸ್ತ ಚಂದ್ರ ತಿಳಿಸಿದ್ದಾರೆ.
ತಮ್ಮ ಸಹೋದರ ಅದೇ ಗ್ರಾಮದ ಯುವತಿಯೊಬ್ಬರನ್ನು ಪ್ರೀತಿಸಿ ಮೂರು ತಿಂಗಳ ಹಿಂದೆ ಕಾನೂನುಬದ್ಧವಾಗಿ ವಿವಾಹವಾಗಿದ್ದು, ಮದುವೆಯನ್ನು ನೋಂದಣಿ ಮಾಡಿಸಲಾಗಿದೆ. ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಹಿರಿಯರ ಸಮ್ಮುಖದಲ್ಲಿ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪೀಠದ ಮುಂದೆ ವಿವಾಹ ನೆರವೇರಿಸಲಾಗಿತ್ತು. ಆರಂಭದಲ್ಲಿ ಯುವತಿಯ ತಂದೆ-ತಾಯಿಯೂ ಮದುವೆಗೆ ಒಪ್ಪಿಗೆ ಸೂಚಿಸಿದ್ದರು ಎಂದು ಚಂದ್ರ ವಿವರಿಸಿದ್ದಾರೆ.
ಆದರೆ, ಯುವತಿಯ ಕಡೆಯ ಕೆಲವರಿಗೆ ಈ ವಿವಾಹ ಇಷ್ಟವಿರಲಿಲ್ಲ. ಪ್ರೇಮ ವಿವಾಹದ ವಿಚಾರವಾಗಿ ದ್ವೇಷ ಸಾಧಿಸುತ್ತಿದ್ದರು ಎನ್ನಲಾಗಿದೆ. ಅ.15ರಂದು ಗ್ರಾಮದಲ್ಲಿ ನವದಂಪತಿಯ ಆಶೀರ್ವಾದ ಸಮಾರಂಭ ಆಯೋಜಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ವಿವಾದವನ್ನು ಬಗೆಹರಿಸಿಕೊಳ್ಳುವ ಪ್ರಯತ್ನವೂ ನಡೆದಿತ್ತು ಎಂದು ಚಂದ್ರ ತಿಳಿಸಿದ್ದಾರೆ.
ಘಟನೆ ನಡೆದ ದಿನ ಬೆಳಗ್ಗೆ ತಾವು ಮತ್ತು ತಮ್ಮ ಸಹೋದರ ಚಹಾ ಕುಡಿಯಲು ಅಂಗಡಿಗೆ ತೆರಳಿದ್ದಾಗ, ಯುವತಿಯ ಕಡೆಯವರು ಎನ್ನಲಾದ ಕೆಲವರು ಏಕಾಏಕಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂತಹ ಘಟನೆಗಳು ಮರುಕಳಿಸದಂತೆ ಪೊಲೀಸರು ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಚಂದ್ರ ಆಗ್ರಹಿಸಿದ್ದಾರೆ.
ಅನಿಲ್, ಶಿವ, ನಾಗೇಶ್ ಮತ್ತು ನರಸಿಂಹ ಸೇರಿದಂತೆ ಹಲ್ಲೆ ನಡೆಸಿದರೆಂದು ಆರೋಪಿಸಲಾದವರ ವಿರುದ್ಧ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕುಬಹುಜನ ಸಮೈಕ್ಯ ಸಮಿತಿಯ ಯುವ ರಾಜ್ಯಾಧ್ಯಕ್ಷ ಅರುಣ್ ಕುಮಾರ್ ಒತ್ತಾಯಿಸಿದ್ದಾರೆ.
ಹಲ್ಲೆಗೊಳಗಾದವರು ಪ್ರಸ್ತುತ ಕೋಲಾರದ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.






