ಕೋಲಾರ-ಮಾಲೂರು ನಕಲಿ ದಾಖಲೆ ಸೃಷ್ಟಿ ಹಗರಣ; 29 ಅಧಿಕಾರಿಗಳು ಶಾಮೀಲು, ತಹಶೀಲ್ದಾರ್‌ಗಳಿಬ್ಬರ ಮೇಲೂ ಕ್ರಮ

ಕೋಲಾರ: ಕಂದಾಯ ಮತ್ತು ಸರ್ವೇ ಇಲಾಖೆಗಳಲ್ಲಿ 2001ರಿಂದ 2024ರವರೆಗಿನ ಅವಧಿಯಲ್ಲಿ ನಡೆದಿದೆ ಎನ್ನಲಾದ ಬೃಹತ್ ನಕಲಿ ಖಾತೆ ಸೃಷ್ಟಿ ಹಾಗೂ ಸರಕಾರಿ ಕಡತಗಳ ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿ ಲೋಕಾಯುಕ್ತ ತನಿಖೆ ಚುರುಕುಗೊಂಡಿದೆ. ಈ ಬಹುಕೋಟಿ ರೂ. ಬೆಲೆಯ ಜಮೀನುಗಳ ನಕಲಿ ದಾಖಲೆ ದಂಧೆಯಲ್ಲಿ ಒಟ್ಟು 29 ಅಧಿಕಾರಿಗಳು ಮತ್ತು ಸಿಬ್ಬಂದಿ ಶಾಮೀಲಾಗಿರುವುದನ್ನು ಜಿಲ್ಲಾಡಳಿತ ಗುರುತಿಸಿದ್ದು, ಈ ಪೈಕಿ ಮೂವರನ್ನು ಅಮಾನತುಗೊಳಿಸಲಾಗಿದೆ. ಅಚ್ಚರಿಯೆಂದರೆ, ಪ್ರಕರಣದ ಮಾಹಿತಿ ನೀಡುವಲ್ಲಿ ವಿಳಂಬ ಧೋರಣೆ ಅನುಸರಿಸಿದ ಕೋಲಾರ ಹಾಗೂ ಮಾಲೂರು ತಹಶೀಲ್ದಾರ್‌ಗಳ ವಿರುದ್ಧವೂ ಶಿಸ್ತುಕ್ರಮ ಜರುಗಿಸುವಂತೆ ಸರಕಾರಕ್ಕೆ ಶಿಫಾರಸು ಮಾಡಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಮಾಹಿತಿ ಬಿಚ್ಚಿಟ್ಟಿದ್ದಾರೆ.
ಮಂಗಳವಾರ ತಮ್ಮ ಕಚೇರಿಯಲ್ಲಿ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸೋಮವಾರವಷ್ಟೇ ನಾನು ಖುದ್ದಾಗಿ ಲೋಕಾಯುಕ್ತ ಕಚೇರಿಗೆ ಭೇಟಿ ನೀಡಿ ಪ್ರಕರಣದ ಸಂಪೂರ್ಣ ತನಿಖಾ ವರದಿಯನ್ನು ಸಲ್ಲಿಸಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಪ್ರಕರಣಕ್ಕೆ ಸಂಬಂಧಿಸಿ ಕಡತಗಳ ನಾಪತ್ತೆ ಹಾಗೂ ನಕಲಿ ದಾಖಲೆ ಸೃಷ್ಟಿಯಾಗಿರುವ ಬಗ್ಗೆ ವರದಿ ನೀಡುವಂತೆ ಕೋಲಾರ ತಹಶೀಲ್ದಾರ್ ನಯನಾ ಹಾಗೂ ಮಾಲೂರು ತಹಶೀಲ್ದಾರ್ ರೂಪಾ ಅವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಇಬ್ಬರೂ ಅಧಿಕಾರಿಗಳು ನಿಗದಿತ ಸಮಯದೊಳಗೆ ವರದಿ ನೀಡದೆ ಕರ್ತವ್ಯಲೋಪವೆಸಗಿದ್ದಾರೆ. ಹೀಗಾಗಿ ಇವರಿಬ್ಬರ ವಿರುದ್ಧವೂ ಶಿಸ್ತುಕ್ರಮ ಕೈಗೊಳ್ಳುವಂತೆ ಸರಕಾರಕ್ಕೆ ವರದಿ ನೀಡಿದ್ದೇನೆ ಎಂದು ತಿಳಿಸಿದರು.
ಹಗರಣದಲ್ಲಿ ಭಾಗಿಯಾಗಿರುವ 29 ಮಂದಿಯಲ್ಲಿ ಈಗಾಗಲೇ ಗುರುತಿಸಲಾಗಿರುವ ಪ್ರಮುಖರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗಿದೆ. ಕಾಮಸಮುದ್ರಂ ವೃತ್ತದ ಕಂದಾಯ ನಿರೀಕ್ಷಕ ಝಮೀರ್ ಪಾಷಾ, ಮಾಲೂರು ವೃತ್ತದ ಕಂದಾಯ ನಿರೀಕ್ಷಕ ಬಿ.ವಿ.ಅರುಣ್ ಕುಮಾರ್ ಹಾಗೂ ಪ್ರಥಮ ದರ್ಜೆ ಸಹಾಯಕ ಕೆ. ರಾಮಮೂರ್ತಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ.
ನಕಲಿ ದಾಖಲೆ ಸೃಷ್ಟಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗ್ರಾಮ ಸಹಾಯಕ ರಾಮಕೃಷ್ಣಪ್ಪ ಎಂಬವರನ್ನು ಸೇವೆಯಿಂದಲೇ ವಜಾಗೊಳಿಸಿ ಆದೇಶ ಹೊರಡಿಸಲಾಗಿದೆ. ಈ ಹಿಂದೆ ದ್ವಿತೀಯ ದರ್ಜೆ ಸಹಾಯಕರಾಗಿದ್ದು, ಪ್ರಸ್ತುತ ಶಿರಸ್ತೇದಾರರಾಗಿ ಭಡ್ತಿ ಪಡೆದಿರುವ ಶಾಂತಮ್ಮ ಮತ್ತು ಭಾರತಿ ಅವರೂ ಪ್ರಕರಣದಲ್ಲಿ ಶಾಮೀಲಾಗಿದ್ದಾರೆ. ಇವರನ್ನು ಅಮಾನತುಗೊಳಿಸುವ ಅಧಿಕಾರ ಪ್ರಾದೇಶಿಕ ಆಯುಕ್ತರಿಗೆ ಇರುವುದರಿಂದ, ಸೂಕ್ತ ಕ್ರಮಕ್ಕಾಗಿ ಆರ್‌ಸಿ ಅವರಿಗೆ ವರದಿ ಕಳುಹಿಸಲಾಗಿದೆ.
ಅಕ್ರಮದಲ್ಲಿ ಕಂದಾಯ ಇಲಾಖೆ ಜೊತೆಗೆ ಸರ್ವೇ ಇಲಾಖೆಯ ಪಾತ್ರವೂ ದೊಡ್ಡದಿದೆ. ಇಬ್ಬರು ಭೂ ದಾಖಲೆಗಳ ಸಹಾಯಕ ನಿರ್ದೇಶಕರು, 4 ಮಂದಿ ಸೂಪರ್‌ವೈಸರ್‌ಗಳು ಹಾಗೂ 4 ಮಂದಿ ಸರ್ವೇಯರ್‌ಗಳು ಸೇರಿದಂತೆ ಒಟ್ಟು 10 ಅಧಿಕಾರಿಗಳ ವಿರುದ್ಧ ಕಠಿಣ ಶಿಸ್ತುಕ್ರಮ ಜರುಗಿಸುವಂತೆ ಭೂಮಾಪನ ಇಲಾಖೆಯ ಆಯುಕ್ತರಿಗೆ ಪತ್ರ ಬರೆಯಲಾಗಿದೆ. (ಈ 10 ಮಂದಿಯಲ್ಲಿ 4 ಅಧಿಕಾರಿಗಳು ಕೋಲಾರದಲ್ಲೇ ಇದ್ದರೆ, 6 ಮಂದಿ ಬೇರೆಡೆಗೆ ವರ್ಗಾವಣೆಯಾಗಿದ್ದಾರೆ).
ಒಟ್ಟು 29 ಜನರಲ್ಲಿ ಈ ಮೇಲಿನ ಅಧಿಕಾರಿಗಳನ್ನು ಹೊರತುಪಡಿಸಿ, ಇನ್ನು 13 ಅಧಿಕಾರಿಗಳ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ. ಇವರಲ್ಲಿ ಹಲವರು ನಿವೃತ್ತರಾಗಿದ್ದಾರೆ ಮತ್ತು ಕೆಲವರು ವರ್ಗಾವಣೆಯಾಗಿದ್ದಾರೆ. ಈ 13 ಮಂದಿಯ ವಿರುದ್ಧ ದೋಷಾರೋಪ ಪಟ್ಟಿ ಸಿದ್ಧಪಡಿಸುವಂತೆ ತಹಶೀಲ್ದಾರ್‌ಗಳಿಗೆ ಗುರುವಾರದವರೆಗೆ ಗಡುವು ನೀಡಲಾಗಿದೆ. ವರದಿ ಬಂದ ತಕ್ಷಣವೇ ಅದನ್ನು ಲೋಕಾಯುಕ್ತಕ್ಕೆ ಪೂರಕ ವರದಿಯಾಗಿ ಸಲ್ಲಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿವರಿಸಿದರು.






