ಕೋಲಾರ : ಬೆಂಬಲ ಬೆಲೆ ಸಿಗದ ಹಿನ್ನೆಲೆ; ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದ ಮಾವು ಬೆಳೆಗಾರರು

ಕೋಲಾರ : ಮಾವು ಬೆಳೆಗೆ ಬೆಂಬಲ ಬೆಲೆ ಸಿಗದ ಹಿನ್ನೆಲೆ ಕೋಲಾರದಲ್ಲಿ ಮಾವು ಬೆಳೆಗಾರರು ಬೆಂಗಳೂರು - ಚೆನ್ನೈ ರಾಷ್ಟ್ರೀಯ ಹೆದ್ದಾರಿ 75 ತಡೆದು ಪ್ರತಿಭಟನೆ ನಡೆಸಿದರು.
ಕೋಲಾರ ನಗರದ ಹೊರ ವಲಯ ಕೊಂಡರಾಜನಹಳ್ಳಿ ಬಳಿ ಮಾವಿನ ಹಣ್ಣನ್ನ ರಸ್ತೆಯಲ್ಲಿ ಸುರಿದು, ರಸ್ತೆ ಬಂದ್ ಮಾಡುವ ಮೂಲಕ ಕೋಲಾರ ಜಿಲ್ಲೆಯ ಮಾವು ಬೆಳೆಗಾರರು ಆಕ್ರೋಶ ಹೊರ ಹಾಕಿದರು. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬೆಂಬಲ ಬೆಲೆ ನೀಡದ ಹಿನ್ನೆಲೆ, ಕಳೆದ 22 ದಿನಗಳಿಂದ ಪ್ರತಿಭಟನೆ, ಬಂದ್, ಹೋರಾಟ ಮಾಡಿದರೂ ಪ್ರಯೋಜನವಾಗದ ಕಾರಣ ಇಂದು ರಾಷ್ಟ್ರೀಯ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಿದರು.
ಬೆಂಬಲ ಬೆಲೆ ನಿಗದಿಯಾಗದಿದ್ದರೆ ಜಿಲ್ಲೆಯನ್ನು ಬಂದ್ ಮಾಡುವ ಎಚ್ವರಿಕೆ ನೀಡಿದರಲ್ಲದೆ ಸಂಜೆ ಒಳಗೆ ಬೆಂಬಲ ಬೆಲೆ ಘೋಷಣೆ ಮಾಡದಿದ್ದರೆ ನಾಳೆ ವಿಧಾನ ಸೌಧಗೆ ಮುತ್ತಿಗೆ ಹಾಕಿ ಬೆಂಗಳೂರಲ್ಲಿ ಮಾವನ್ನು ಸುರಿದು ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು. ಅಲ್ಲದೆ ಗುರುವಾರ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆ ಬಂದ್ ಮಾಡುವುದಾಗಿ ಘೋಷಣೆ ಮಾಡಿದರು.
ಪ್ರತಿಭಟನೆಯಲ್ಲಿ ಮಾವು ಬೆಳೆಗಾರರ ಸಂಘದ ಜಿಲ್ಲಾ ಅಧ್ಯಕ್ಷ ನೀಲಟೂರು ಚಿನ್ನಪ್ಪ ರೆಡ್ಡಿ, ಪಾತಕೋಟ ನವೀನ್, ಸಿಪಿಎಂ ಮುಖಂಡ ಸೂರ್ಯನಾರಾಯಣ, ವಿ.ಗೀತಾ ರೈತ ಸಂಘದ ಮುಖಂಡರು ಭಾಗವಹಿಸಿದ್ದರು.







