ಕೋಲಾರ | ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯರ ಮೇಲೆ ತಂಡದಿಂದ ಗಂಭೀರ ಹಲ್ಲೆ
ಓದಲು ತೊಂದರೆಯಾಗುವುದರಿಂದ ದೇವಾಲಯದ ಧ್ವನಿವರ್ಧಕ ಧ್ವನಿ ತಗ್ಗಿಸಲು ಹೇಳಿದ್ದಕ್ಕೆ ಕೃತ್ಯ: ಓರ್ವ ಆರೋಪಿಯ ಸೆರೆ

ಕೋಲಾರ, ಎ.11: ಕ್ಷುಲ್ಲಕ ವಿಚಾರಕ್ಕೆ ತಂಡವೊಂದು ಹಿರಿಯ ಸಾಹಿತಿ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಅವರ ಪುತ್ರನ ಮೇಲೆ ತಂಡವೊಂದು ಗಂಭೀರವಾಗಿ ಹಲ್ಲೆ ನಡೆಸಿರುವ ಘಟನೆ ಕೋಲಾರ ತಾಲೂಕಿನ ಅಂತರಗಂಗೆ ಬೆಟ್ಟದ ಪಾಪರಾಜನಹಳ್ಳಿಯ ಮುನೇಶ್ವರ ದೇವಾಲಯ ಬಳಿ ಇಂದು ಮುಂಜಾನೆ ನಡೆದಿರುವುದು ವರದಿಯಾಗಿದೆ.
ಪಾಪರಾಜನಹಳ್ಳಿ ಗ್ರಾಮದ ಬಳಿ ಇರುವ ಮುನೇಶ್ವರ ದೇವಾಲಯದಲ್ಲಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಜೋರಾದ ಧ್ವನಿಯಲ್ಲಿ ಧ್ವನಿವರ್ಧಕ ಬಳಕೆ ಮಾಡಲಾಗುತ್ತಿದೆ. ಇದೇರೀತಿ ಇಂದು ಬೆಳಗ್ಗೆಯೂ ಧ್ವನಿವರ್ಧಕ ಬಳಸಲಾಗಿತ್ತು. ಧ್ವನಿವರ್ಧಕದ ಅತಿಯಾದ ಧ್ವನಿಯಿಂದ ಓದಲು ತೊಂದರೆ ಆಗುತ್ತಿದೆ ಎಂದು ಆಕ್ಷೇಪಿಸಿದ ಕೋಟಿಗಾನಹಳ್ಳಿ ರಾಮಯ್ಯ ಅವರು ಧ್ವನಿವರ್ಧಕದ ಸೌಂಡ್ ಒಂದಿಷ್ಟು ಕಡಿಮೆ ಮಾಡುವಂತೆ ಹೇಳಿದರೆನ್ನಲಾಗಿದೆ. ಇದನ್ನು ಒಪ್ಪದ ಆರೋಪಿಗಳಾದ ಮಂಜುನಾಥ್, ಬೈರಪ್ಪ, ಸುಬ್ಬು ಸೇರಿದಂತೆ ಇತರರು ಕೋಟಿಗಾನಹಳ್ಳಿ ರಾಮಯ್ಯರ ಜೊತೆ ಜಗಳಕ್ಕಿಳಿದಿದ್ದಾರೆ. ಬಳಿಕ ರಾಮಯ್ಯ ಹಾಗೂ ಅವರ ಪುತ್ರ ಮೇಘಾವರ್ಷ ಅವರ ಮೇಲೆ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸ್ ದೂರಿನಲ್ಲಿ ತಿಳಿಸಲಾಗಿದೆ.
ಗಂಭೀರವಾಗಿ ಹಲ್ಲೆಗೆ ಒಳಗಾದ ಕೋಟಿಗಾನಹಳ್ಳಿ ರಾಮಯ್ಯ ಹಾಗೂ ಪುತ್ರ ಮೇಘಾವರ್ಷ ಜಿಲ್ಲಾಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಕೋಲಾರ ಗ್ರಾಮಾಂತರ ಠಾಣಾ ಪೊಲೀಸರು ಓರ್ವ ಆರೋಪಿಯನ್ನು ಬಂಧಿಸಿದ್ದಾರೆ.





