Kolara | ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ಸ್ಪರ್ಶಕ್ಕೊಳಗಾಗಿ ಎರಡು ಹಸುಗಳು ಸಾವು

ಕೋಲಾರ, .9: ತುಂಡಾಗಿ ಬಿದ್ದಿದ್ದ 11 ಕೆ.ವಿ. ವಿದ್ಯುತ್ ತಂತಿಯ ಸ್ಪರ್ಶಕ್ಕೊಳಗಾಗಿ ಎರಡು ಹಸುಗಳು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟ ಘಟನೆ ಬಂಗಾರಪೇಟೆ ತಾಲೂಕಿನ ಸಿದ್ಧನಹಳ್ಳಿ ಗ್ರಾಮದಲ್ಲಿ ರವಿವಾರ ಬೆಳಗ್ಗೆ ನಡೆದಿದೆ.
ಇದರೊಂದಿಗೆ ವಿದ್ಯುತ್ ವೋಲ್ಟೇಜ್ ಏರುಪೇರಿನಿಂದಾಗಿ 15ಕ್ಕೂ ಹೆಚ್ಚು ಕೃಷಿ ಪಂಪ್ಸೆಟ್ ಮೋಟರ್ ಗಳು ಸುಟ್ಟುಹೋಗಿದ್ದು, ರೈತರು ಆತಂಕಕ್ಕೆ ಒಳಗಾಗಿದ್ದಾರೆ.
ಬಂಗಾರಪೇಟೆ–ಕೋಲಾರ ಮುಖ್ಯ ರಸ್ತೆಯ ಹಂಚಾಳ ಸಮೀಪದ ಕೆಎಂ ಕಾರಿಯಪ್ಪ ಶಾಲೆಯ ಹಿಂಭಾಗದಲ್ಲಿ ಈ ಅವಘಡ ಸಂಭವಿಸಿದೆ.
ಸಿದ್ಧನಹಳ್ಳಿ ಗ್ರಾಮದ ರಾಮಕೃಷ್ಣಪ್ಪ ಎಂಬುವವರಿಗೆ ಸೇರಿದ ಹಸುಗಳು ವಿದ್ಯುತ್ ಆಘಾತಕ್ಕೊಳಗಾಗಿ ಅಸುನೀಗಿವೆ. ರವಿವಾರ ಬೆಳಗ್ಗೆ ಸುಮಾರು 8:15ರ ವೇಳೆ ವಿದ್ಯುತ್ ಪ್ರವಹಿಸುತ್ತಿದ್ದ ತಂತಿ ತುಂಡಾಗಿ ಕೆಳಗೆ ಬಿದ್ದಿದೆ. ತಂತಿ ಬಿದ್ದ ತಕ್ಷಣವೇ ಸಮೀಪದಲ್ಲಿದ್ದ ಹಸುಗಳ ಮೇಲೆ ವಿದ್ಯುತ್ ಪ್ರವಹಿಸಿ ಎರಡು ರಾಸುಗಳು ಸ್ಥಳದಲ್ಲೇ ಜೀವಬಿಟ್ಟಿವೆ.
ಮೃತಪಟ್ಟ ಹಸುಗಳೇ ತಮ್ಮ ಕುಟುಂಬದ ಜೀವನೋಪಾಯಕ್ಕೆ ಮುಖ್ಯ ಆಧಾರವಾಗಿದ್ದವು ಎಂದು ನೊಂದ ಮಾಲೀಕ ರಾಮಕೃಷ್ಣಪ್ಪ ಕಣ್ಣೀರಿಟ್ಟಿದ್ದಾರೆ. ಹಸುಗಳನ್ನು ಕಳೆದುಕೊಂಡ ದುಃಖದ ಬೆನ್ನಲ್ಲೇ, ವಿದ್ಯುತ್ ವ್ಯತ್ಯಯದಿಂದ ಗ್ರಾಮದ ರೈತರಿಗೆ ಮತ್ತೊಂದು ದೊಡ್ಡ ಆಘಾತ ಎದುರಾಗಿದೆ. ವೋಲ್ಟೇಜ್ ಕೈಕೊಟ್ಟ ಪರಿಣಾಮ ಸುಮಾರು 15 ಕೃಷಿ ಪಂಪ್ ಸೆಟ್ ಮೋಟರ್ ಗಳು ಸುಟ್ಟು ಭಸ್ಮವಾಗಿವೆ. ಈಗಾಗಲೇ ಬರ ಹಾಗೂ ವಿವಿಧ ಸಂಕಷ್ಟಗಳಿಂದ ಕಂಗೆಟ್ಟಿರುವ ಅನ್ನದಾತರಿಗೆ, ಮೋಟಾರ್ಗಳ ದುರಸ್ತಿಗೆ ಹೆಚ್ಚಿನ ಹಣ ಖರ್ಚು ಮಾಡಬೇಕಾದ ಅನಿವಾರ್ಯ ಎದುರಾಗಿದ್ದು, ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ಘಟನೆಗೆ ಬೆಸ್ಕಾಂ (BESCOM) ಸಿಬ್ಬಂದಿಯ ನಿರ್ಲಕ್ಷ್ಯವೇ ನೇರ ಕಾರಣ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಗ್ರಾಮದಲ್ಲಿ ವಿದ್ಯುತ್ ಮಾರ್ಗದ ತಂತಿಗಳು ತೀರಾ ಕೆಳಮಟ್ಟದಲ್ಲಿರುವ ಬಗ್ಗೆ ಹಾಗೂ ಯಾವುದೇ ಸಮಯದಲ್ಲಿ ಅಪಾಯ ಸಂಭವಿಸಬಹುದು ಎಂಬ ಬಗ್ಗೆ ಈ ಹಿಂದೆಯೇ ಹಲವು ಬಾರಿ ಬೆಸ್ಕಾಂ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು. ತಂತಿಗಳನ್ನು ಸ್ವಲ್ಪ ಮೇಲಕ್ಕೆ ಎಳೆಯುವಂತೆ ಮನವಿ ಮಾಡಿದ್ದರೂ, ಸ್ಥಳೀಯ ಸಿಬ್ಬಂದಿ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೆ ಸಂಪೂರ್ಣ ನಿರ್ಲಕ್ಷ್ಯ ತೋರಿದ್ದಾರೆ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂತ್ರಸ್ತ ರೈತ ಕುಟುಂಬಕ್ಕೆ ಸರ್ಕಾರ ಹಾಗೂ ಬೆಸ್ಕಾಂ ವತಿಯಿಂದ ತಕ್ಷಣವೇ ಸೂಕ್ತ ಪರಿಹಾರ ನೀಡಬೇಕು, ಹಾನಿಗೊಳಗಾದ ಎಲ್ಲಾ ಪಂಪ್ಸೆಟ್ ಮೋಟಾರ್ಗಳಿಗೆ ಪರಿಹಾರ ಒದಗಿಸಬೇಕು ಮತ್ತು ಗ್ರಾಮದಲ್ಲಿರುವ ಅಪಾಯಕಾರಿ ವಿದ್ಯುತ್ ಮಾರ್ಗಗಳನ್ನು ತಕ್ಷಣ ಸರಿಪಡಿಸಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ. ಕರ್ತವ್ಯಲೋಪವೆಸೆದ ಬೆಸ್ಕಾಂ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.






