Kolara | ಪತಿಯನ್ನು ಕೊಲೆಗೈದು ಆರೋಪಿ ಪತ್ನಿ ಪೊಲೀಸ್ ಠಾಣೆಗೆ ಶರಣು

ಕೋಲಾರ, ಆ.12: ಪತಿಯನ್ನು ಪತ್ನಿಯೇ ಕೊಲೆಗೈದು ಪೊಲೀಸ್ ಠಾಣೆಗೆ ತೆರಳಿ ಶರಣಾದ ಘಟನೆ ಕೋಲಾರದಲ್ಲಿ ಜರುಗಿದೆ.
ಕೋಲಾರ ತಾಲೂಕು ಚೆನ್ನಸಂದ್ರ ಗ್ರಾಮದಲ್ಲಿ ಘಟನೆ ನಡೆದಿದ್ದು, ನಾರಾಯಣಸ್ವಾಮಿ (68) ಕೊಲೆಯಾದವರು. ಅವರ ಪತ್ನಿ ಜಗದಾಂಬ (58) ಕೊಲೆ ಆರೋಪಿಯಾಗಿದ್ದು, ಆಕೆ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾಳೆ.
ಜಮೀನು ಮಾರಾಟ ಮಾಡಿದ ಹಣ ಕೊಟ್ಟಿಲ್ಲ ಅನ್ನುವ ಕಾರಣಕ್ಕೆ ಪತಿ ನಾರಾಯಣಸ್ವಾಮಿಗೆ ಊಟದಲ್ಲಿ ನಿದ್ರೆ ಮಾತ್ರೆ ಹಾಕಿ ಕೊಟ್ಟಿದ್ದ ಆರೋಪಿ ಪತ್ನಿ ಜಗದಾಂಬ, ನಿದ್ದೆಯಲ್ಲಿದ್ದ ವೇಳೆ ಹಗ್ಗದಿಂದ ನಾರಾಯಣಸ್ವಾಮಿಯ ಕುತ್ತಿಗೆ ಬಿಗಿದು ಕೊಲೆ ಮಾಡಿದ್ದಾಳೆ ಎಂದು ಹೇಳಲಾಗುತ್ತಿದೆ.
ಈ ದಂಪತಿ ಕೆಲ ಸಮಯದಿಂದ ಪ್ರತ್ಯೇಕವಾಗಿ ವಾಸವಿದ್ದರು. ಆದರೆ ಹಣಕ್ಕಾಗಿ ಕಳೆದೆರಡು ಮೂರು ದಿನದಿಂದ ಪುಸಲಾಯಿಸಿ ನಾರಾಯಣಸ್ವಾಮಿಯನ್ನು ತೋಟದ ಮನೆಗೆ ಕೆರತಂದು ಕೊಲೆ ಮಾಡಲಾಗಿದೆ. ಕೃತ್ಯದ ಬಳಿಕ ಆರೋಪಿ ಪತ್ನಿ ಪೊಲೀಸ್ ಠಾಣೆಗೆ ಹೋಗಿ ದೂರು ಕೊಟ್ಟಿದ್ದಾಳೆ.
ವೇಮಗಲ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗತ್ತಿಕೊಂಡಿದ್ದಾರೆ.




