ಕೋಲಾರ | ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿಯ ಮೃತದೇಹ ಕೆರೆಯಲ್ಲಿ ಪತ್ತೆ

ಕೋಲಾರ : ಸಾಮಾಜಿಕ-ಶೈಕ್ಷಣಿಕ ಸಮೀಕ್ಷೆಗೆ ತೆರಳಿ ನಾಪತ್ತೆಯಾಗಿದ್ದ ಶಿಕ್ಷಕಿ ಶವವಾಗಿ ಪತ್ತೆಯಾಗಿರುವ ಘಟನೆ ಕೋಲಾರ ಜಿಲ್ಲೆಯಲ್ಲಿ ನಡೆದಿದೆ.
ಮೃತ ಶಿಕ್ಷಕಿಯನ್ನು ಕೋಲಾರ ನಗರದ ಮಹಾಲಕ್ಷ್ಮಿ ಬಡಾವಣೆಯ ನಿವಾಸಿ ಅಖ್ತರಿ ಬೇಗಂ (53) ಎಂದು ಗುರುತಿಸಲಾಗಿದೆ.
ಕೋಲಾರ ತಾಲ್ಲೂಕು ಕೆ.ಬಿ.ಹೊಸಹಳ್ಳಿಯ ಶಾಲಾ ಶಿಕ್ಷಕಿ, ಎರಡು ದಿನಗಳ ಹಿಂದೆ ಕೋಲಾರ ತಾಲ್ಲೂಕು ನರಸಾಪುರ ಗ್ರಾಮದಲ್ಲಿ ಸಮೀಕ್ಷೆ ಮುಗಿಸಿ ನಾಪತ್ತೆಯಾಗಿದ್ದರು. ಕೋಲಾರ ಜಿಲ್ಲೆ ಕೆಜಿಎಫ್ ತಾಲ್ಲೂಕಿ ಐಯ್ಪಲ್ಲಿ ಕೆರೆಯಲ್ಲಿ ಅವರ ಮೃತದೇಹ ಪತ್ತೆಯಾಗಿದೆ.
ಈ ಸಂಬಂಧ ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿತ್ತು.
ಚಿಗರಾಪುರ ಗೇಟ್ ಬಳಿ ಇರುವ ಐಯ್ಪಲ್ಲಿ ಕೆರೆಯ ಮೃತದೇಹ ಸಿಕ್ಕ ಜಾಗದಲ್ಲಿ ಪತ್ತೆಯಾದ ಶಿಕ್ಷಕಿಯ ಬ್ಯಾಗ್ ನಲ್ಲಿ ಸೋಮವಾರ ಬೆಳಿಗ್ಗೆ ಕೋಲಾರದಿಂದ - ಬೇತಮಂಗಲಕ್ಕೆ ನಂತರ ಬೇತಮಂಗಲದಿಂದ ಚಿಗರಾಪುರ ಗೇಟ್ ವರೆಗೆ ಬಂದಿರುವ ಟಿಕೆಟ್ ಪತ್ತೆಯಾಗಿದೆ.
ಶಿಕ್ಷಕಿ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದ್ದು, ಸಾವಿಗೆ ನಿಖರ ಕಾರಣ ಪೊಲೀಸರ ತನಿಖೆಯಿಂದ ತಿಳಿಯಬೇಕಿದೆ.
ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಅವರ ಮಾರ್ಗದರ್ಶನದಲ್ಲಿ ಪ್ರಕರಣ ತನಿಖೆ ನಡೆಯುತ್ತಿದೆ.







