ಫಾಲ್ಡೋ ಫ್ಯೂಚರ್ಸ್ ಫೈನಲ್‌ಗೆ ಭಾರತದ ಪ್ರತಿನಿಧಿಯಾಗಿ ಕೋಲಾರದ ಅದ್ವೈತ್ ಮಹೇಶ್

ಕೋಲಾರ: ಭಾರತದ ಕಿರಿಯ ಗಾಲ್ಫ್ ಪ್ರತಿಭೆ ಅದ್ವೈತ್ ಮಹೇಶ್ ಅವರು ಪ್ರತಿಷ್ಠಿತ ಫಾಲ್ಡೋ ಫ್ಯೂಚರ್ಸ್ ಫೈನಲ್–2026 ಅಂತರರಾಷ್ಟ್ರೀಯ ಗಾಲ್ಫ್ ಪಂದ್ಯಾವಳಿಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ.
ಪ್ರಸಿದ್ಧ ಗಾಲ್ಫ್ ಆಟಗಾರ ಹಾಗೂ ಮಾಜಿ ವಿಶ್ವ ನಂ.1 ಸರ್ ನಿಕ್ ಫಾಲ್ಡೋ ಅವರ ಆತಿಥ್ಯದಲ್ಲಿ ಆ.26 ಮತ್ತು 27ರಂದು ಇಂಗ್ಲೆಂಡ್‌ನ ದಿ ಬೆಲ್ಫ್ರಿಯಲ್ಲಿ ಪಂದ್ಯಾವಳಿ ನಡೆಯಲಿದೆ. 7ರಿಂದ 12 ವರ್ಷದೊಳಗಿನ ಪ್ರತಿಭಾವಂತ ಕಿರಿಯ ಗಾಲ್ಫ್ ಆಟಗಾರರಿಗೆ ರಾಷ್ಟ್ರೀಯ ಹಾಗೂ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತಿಭೆ ಪ್ರದರ್ಶಿಸಲು ಫಾಲ್ಡೋ ಫ್ಯೂಚರ್ಸ್ ವೇದಿಕೆ ಕಲ್ಪಿಸುತ್ತದೆ.
ವಿವಿಧ ಹಂತಗಳ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡಿದ ಬಳಿಕ ಅದ್ವೈತ್ ಫ್ಯೂಚರ್ಸ್ ಫೈನಲ್‌ಗೆ ಅರ್ಹತೆ ಪಡೆದಿದ್ದಾರೆ. ಕೋಲಾರ ಜಿಲ್ಲೆಯ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್ ಕೆ. ಅವರ ಪುತ್ರರಾದ ಅದ್ವೈತ್, ಬಾಲ್ಯದಿಂದಲೇ ಗಾಲ್ಫ್‌ನಲ್ಲಿ ಆಸಕ್ತಿ ಬೆಳೆಸಿಕೊಂಡಿದ್ದು, ಕಳೆದ ಮೂರು ವರ್ಷಗಳಿಂದ ಜಿಯಾನ್ ಹಿಲ್ಸ್ ಗಾಲ್ಫ್ ಕೌಂಟಿಯ ತರುಣ್ ಸರ್ದೇಸಾಯಿ ಗಾಲ್ಫ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿದ್ದಾರೆ.
ಈ ಅವಧಿಯಲ್ಲಿ ರಾಜ್ಯ ಹಾಗೂ ರಾಷ್ಟ್ರಮಟ್ಟದ ಹಲವು ಪ್ರಶಸ್ತಿಗಳನ್ನು ಗೆದ್ದಿರುವ ಅದ್ವೈತ್, ಇದೀಗ ಅಂತರರಾಷ್ಟ್ರೀಯ ವೇದಿಕೆಯಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಪಡೆದಿದ್ದಾರೆ. ವಿಶ್ವದ ವಿವಿಧ ಭಾಗಗಳಿಂದ ಆಯ್ಕೆಯಾಗಿರುವ ಪ್ರತಿಭಾವಂತ ಕಿರಿಯ ಗಾಲ್ಫ್ ಆಟಗಾರರು ಪಂದ್ಯಾವಳಿಯಲ್ಲಿ ಭಾಗವಹಿಸಲಿದ್ದಾರೆ.
ಅದ್ವೈತ್ ಅವರ ಸಾಧನೆ ಕೋಲಾರ ಜಿಲ್ಲೆಯ ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆಯ ವಿಷಯವಾಗಿದ್ದು, ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿ ದೇಶಕ್ಕೆ ಕೀರ್ತಿ ತರಲಿ ಎಂದು ಕ್ರೀಡಾಭಿಮಾನಿಗಳು ಹಾಗೂ ಸಾರ್ವಜನಿಕರು ಶುಭ ಹಾರೈಸಿದ್ದಾರೆ.






