ಕೋಲಾರದ ಕೀಲುಕುದುರೆ ಕಲಾವಿದ ಎಂ. ತೋಪಣ್ಣರಿಗೆ ರಾಜ್ಯೋತ್ಸವ ಪ್ರಶಸ್ತಿ

ಎಂ. ತೋಪಣ್ಣ
ಕೋಲಾರ, ಅ.30: ಕೀಲುಕುದುರೆ ಕಲಾವಿದ ಎಂ. ತೋಪಣ್ಣ ಅವರಿಗೆ 2025ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ.
ಕಳೆದ ಐದು ದಶಕಗಳಿಂದ ಕೀಲುಕುದುರೆ, ಗಾರುಡಿ ಗೊಂಬೆ, ಮರಗೋಲು ಮುಂತಾದ ನಾಡಿನ ಪರಂಪರೆಯ ಕಲೆಗಳನ್ನು ಜೀವಂತವಾಗಿಟ್ಟುಕೊಳ್ಳುವ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ತೋಪಣ್ಣ ಅವರು, ಈಗಾಗಲೇ 70 ಕ್ಕೂ ಹೆಚ್ಚು ಜಿಲ್ಲಾ, ರಾಜ್ಯ ಹಾಗೂ ರಾಷ್ಟ್ರ ಮಟ್ಟದ ಗೌರವಕ್ಕೆ ಪಾತ್ರರಾಗಿದ್ದಾರೆ.
1962ರ ಜೂನ್ 6ರಂದು ಕೋಲಾರ ತಾಲ್ಲೂಕಿನ ವೇಮಗಲ್ ಹೋಬಳಿಯ ಮಂಚಂಡಹಳ್ಳಿ ಗ್ರಾಮದಲ್ಲಿ ಜನಿಸಿದ ತೋಪಣ್ಣ, ನಾಗಮ್ಮ ಮತ್ತು ಮುನಿಯಪ್ಪ ದಂಪತಿಯ ಪುತ್ರ. ಮೂಲತಃ ಕುಂಬಾರಿಕೆ ಕುಟುಂಬದಲ್ಲಿ ಜನಿಸಿದ ಇವರು ತಮ್ಮ ಸೋದರ ಮಾವ ದಿವಂಗತ ಕೆ.ಎಸ್. ಮುನಿಯಪ್ಪರಿಂದ ಬಳುವಳಿಯಾಗಿ ಕೀಲುಕುದುರೆ ಕಲೆ ಕಲಿತುಕೊಂಡರು.
ಸೋದರ ಮಾವ ಕೀಲುಕುದುರೆ ಕಲಾವಿದರಾಗಿದ್ದರು, ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲ್ಲೂಕಿನ ಜಂಗಮ ಕೋಟೆಯಲ್ಲಿ ವಾಸವಿದ್ದರು. ಬಾಲ್ಯದಲ್ಲಿ ತಾಯಿಯ ತವರಿನಲ್ಲಿದ್ದ ಇವರು ಸೋದರ ಮಾವನವರು ತಯಾರಿಸುವ ಬೊಂಬೆಗಳ ಜೊತೆ ನಂಟು ಬೆಳೆಸಿಕೊಂಡು ಕಲೆಯ ಆಕರ್ಷಣೆಗೆ ಒಳಗಾಗಿದ್ದರು. ಸೋದರ ಮಾವ ಜಾನಪದ ಕಲೆಯಲ್ಲಿ ರಾಜ್ಯ ಪ್ರಶಸ್ತಿಯನ್ನು ಪಡೆದ ಸ್ಪೂರ್ತಿಯಾಗಿ ಕೀಲುಕುದುರೆ ಗಾರುಡಿ ಗೊಂಬೆ ಮರಗೋಲು ಕಲೆಗಳನ್ನು ಮೈಗೂಡಿಸಿಕೊಂಡು ಕಲಾ ಸೇವೆಗೆ ತಮ್ಮನ್ನು ಸಂಪೂರ್ಣವಾಗಿ ಅರ್ಪಿಸಿಕೊಂಡರು. ಈ ಮೂಲಕ ಕೀಲುಕುದುರೆ ಕಲಾವಿದನಾಗಿ ರೂಪುಗೊಳ್ಳಲು ಕಾರಣವಾಯಿತು.
ಬಾಲ್ಯದಲ್ಲಿಯೇ ಬೊಂಬೆಗಳ ಲೋಕದೊಂದಿಗೆ ನಂಟು ಬೆಳೆಸಿಕೊಂಡ ತೋಪಣ್ಣ ಅವರು ನಂತರ ಶ್ರೀ ವಿನಾಯಕ ಕೀಲುಕುದುರೆ ನೃತ್ಯ ಯುವಕರ ಸಂಘವನ್ನು ಸ್ಥಾಪಿಸಿ ಕೋಲಾರ ಹಾಗೂ ಸುತ್ತಮುತ್ತಲಿನ ಯುವಕರಿಗೆ ಕಲಾ ತರಬೇತಿ ನೀಡುತ್ತಾ ಕಲೆ ಜೀವಂತವಾಗಿಡುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.
ಹುಣಿಸೆ ಪುಡಿ ಮತ್ತು ಗೋಂದಿನಿಂದ ತಯಾರಿಸುತ್ತಿದ್ದ ಬೊಂಬೆಗಳನ್ನು ಬದಲಾಗಿ, ಬಿದಿರು, ಕಾಗದ, ಬಟ್ಟೆ ಹಾಗೂ ತಂತಿ ಬಳಸಿ ತೂಕ ಕಡಿಮೆ ಮತ್ತು ಸುಂದರ ಗೊಂಬೆಗಳನ್ನು ತಯಾರಿಸುವ ನವೀನ ಪ್ರಯತ್ನವನ್ನು ತೋಪಣ್ಣ ಮಾಡಿದ್ದಾರೆ. ಕೀಲುಕುದುರೆ, ಕಾವಡಿ, ಹುಲಿ, ನವಿಲು, ಮಹಿಷಿ, ಕರಡಿ, ಮರಗೋಲು ಮುಂತಾದ ಹಲವು ಮಾದರಿಗಳ ಬೊಂಬೆಗಳ ತಯಾರಿಕೆಯಲ್ಲಿ ಪರಿಣತರು.
ತಮ್ಮ ಕಲೆಯ ಮೂಲಕ ನೂರಾರು ಯುವ ಪ್ರತಿಭೆಗಳಿಗೆ ತರಬೇತಿ ನೀಡಿ ಕೀಲುಕುದುರೆ, ಗಾರುಡಿ ಗೊಂಬೆ, ಮರಗೋಲು ಮುಂತಾದ ಕಲೆಗಳ ಪಾಠ ಕಲಿಸಿರುವ ತೋಪಣ್ಣ ಅವರು ರಾಜ್ಯದಾದ್ಯಂತ ಹಾಗೂ ತಮಿಳುನಾಡು, ಆಂಧ್ರ, ತೆಲಂಗಾಣ, ಕೇರಳ ಮತ್ತು ದಿಲ್ಲಿ ಉತ್ಸವಗಳಲ್ಲಿ ಪ್ರದರ್ಶನ ನೀಡಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದ್ದಾರೆ.







