ಶ್ರೀನಿವಾಸಪುರ: 28ನೇ ದಿನಕ್ಕೆ ಕಾಲಿಟ್ಟ ರೈತರ ಅನಿರ್ದಿಷ್ಟಾವಧಿ ಧರಣಿ

ಕೋಲಾರ: ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಮಲ್ಲಂಪಲ್ಲಿ ಗ್ರಾಮದ ಸರ್ವೆ ನಂಬರ್ 35ರ ಭೂವ್ಯಾಜ್ಯ ತಾರಕಕ್ಕೇರಿದೆ. ಕಂದಾಯ ಇಲಾಖೆಯಿಂದ ಕಾನೂನುಬದ್ಧವಾಗಿ ಮಂಜೂರಾಗಿರುವ ಜಮೀನನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಆರೋಪಿಸಿ 'ಭೂ ಹೋರಾಟ ಸಮಿತಿ' ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 28ನೇ ದಿನಕ್ಕೆ ಕಾಲಿಟ್ಟಿದೆ. ಕೊರೆಯುವ ಚಳಿಯನ್ನೂ ಲೆಕ್ಕಿಸದೆ ರೈತರು ತಾಲೂಕು ಕಚೇರಿ ಎದುರು ಹಗಲು-ರಾತ್ರಿ ಧರಣಿ ನಡೆಸುತ್ತಿದ್ದಾರೆ.
ಅಕ್ಟೋಬರ್ 29ರಿಂದ ತಾಲೂಕು ಕಚೇರಿ ಮುಂದೆ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಭೂ ಹೋರಾಟ ಸಮಿತಿಯು ಪ್ರಮುಖವಾಗಿ ಎರಡು ಬೇಡಿಕೆಗಳನ್ನು ಮುಂದಿಟ್ಟಿದೆ.
ರೈತರ ಮೇಲೆ ಹಲ್ಲೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿಯ ವಿರುದ್ಧ ಕೂಡಲೇ ಎಫ್‌ಐಆರ್ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು. ರೈತರ ಸ್ವಾಧೀನದಲ್ಲಿರುವ ಜಮೀನನ್ನು ಜಂಟಿ ಸರ್ವೇ ನಡೆಸಿ, ಗಡಿ ಗುರುತಿಸಿ ರೈತರ ಅನುಭವಕ್ಕೆ ಬಿಟ್ಟುಕೊಡಬೇಕು ಎಂಬುವುದು ಪ್ರತಿಭಟನಾಕಾರರ ಬೇಡಿಕೆಗಳಾಗಿವೆ.
ಡಿಸೆಂಬರ್ 5ರ ಅಂತಿಮ ಗಡುವು:
ಸಮಸ್ಯೆ ಬಗೆಹರಿಸಲು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಭೂ ಹೋರಾಟ ಸಮಿತಿಯು ಡಿಸೆಂಬರ್ 5ರವರೆಗೆ ಅಂತಿಮ ಗಡುವು ನೀಡಿದೆ. ಗಡುವಿನೊಳಗೆ ನ್ಯಾಯ ಸಿಗದಿದ್ದಲ್ಲಿ, ಹೋರಾಟವನ್ನು ಜಿಲ್ಲಾ ಕೇಂದ್ರಕ್ಕೆ ಕೊಂಡೊಯ್ದು ಜಿಲ್ಲಾದ್ಯಂತ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸಮಿತಿ ಎಚ್ಚರಿಸಿದೆ.
ಅರಣ್ಯ ಇಲಾಖೆಯ ಅಧಿಕಾರಿಗಳು ಕಂದಾಯ ಇಲಾಖೆಯ ಬಹು ಮುಖ್ಯ ದಾಖಲೆಯಾದ "ಖರ್ದಾ" ಸಹ ಒಪ್ಪದೆ, ರೈತರಿಗೆ ತೊಂದರೆ ನೀಡುತ್ತಿದ್ದಾರೆ. ಸರ್ಕಾರ ಒಂದು ತಿಂಗಳ ಕಾಲಮಿತಿಯೊಳಗೆ ಸಮಸ್ಯೆ ಇತ್ಯರ್ಥಪಡಿಸದಿದ್ದರೆ ಹೋರಾಟ ಜಿಲ್ಲಾ ಕೇಂದ್ರಕ್ಕೆ ಕೊಂಡೊಯ್ದು ಉಗ್ರ ಹೋರಾಟ ನಡೆಸುತ್ತೇವೆ.
- ಎನ್.ಮುನಿಸ್ವಾಮಿ, ರಾಜ್ಯ ಸಂಘಟನಾ ಸಂಚಾಲಕ, ದಲಿತ ಸಂಘರ್ಷ ಸಮಿತಿ.






