ಕೋಲಾರ ಜಿಲ್ಲೆಯಲ್ಲಿ ಒಂದೇ ದಿನ ಎರಡು ಭೀಕರ ರಸ್ತೆ ಅಪಘಾತ: ಐವರ ಸಾವು

ಕೋಲಾರ, ಜೂ.10: ಜಿಲ್ಲೆಯಲ್ಲಿ ಒಂದೇ ದಿನ ಎರಡು ಭೀಕರ ರಸ್ತೆ ಅಪಘಾತಗಳು ಸಂಭವಿಸಿ ಐವರು ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ.
ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಹೆದ್ದಾರಿಯಲ್ಲಿ ಕಾರೊಂದು ಡಿವೈಡರ್ ಗೆ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದು, ಇಬ್ಬರು ಗಾಯಗೊಂಡಿದ್ದಾರೆ.
ಕೋಲಾರ ಜಿಲ್ಲೆಯ ಕೆಜಿಎಫ್ ತಾಲೂಕಿನ ಕೃಷ್ಣಾವರಂ ಬಳಿ ಅಪಘಾತ ಸಂಭವಿಸಿದೆ. ಚಾಲಕನ ನಿಯಂತ್ರಣ ತಪ್ಪಿ ಸ್ವಿಫ್ಟ್ ಕಾರು ಡಿವೈಡರ್ ಗೆ ಢಿಕ್ಕಿ ಹೊಡೆದಿದೆ. ಇದರಿಂದ ಗಂಭೀರವಾಗಿ ಗಾಯಗೊಂಡಿದ್ದ ಕೃಷ್ಣಾವರಂ ಗ್ರಾಮದ ಆಕಾಶ್ (33) ಮತ್ತು ಜಾನ್ (22) ಎಂಬವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಅಪ್ಪು ಅಲಿಯಾಸ್ ಭಾಸ್ಕರ್ ಎಂಬವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.
ಕಾರಿನಲ್ಲಿದ್ದ ತಮಿಳರಸನ್, ನಾಗರಾಜು ಎಂಬವರಿಗೆ ಗಾಯಗಳಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಬಗ್ಗೆ ಬೆಮೆಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಾಲೂರು ತಾಲೂಕಿನ ಎಡಗಿನಬೆಲೆ ಟೋಲ್ ಬಳಿ ಚೆನ್ನೈ-ಬೆಂಗಳೂರು ಎಕ್ಸ್ ಪ್ರೆಸ್ ಕಾರಿಡಾರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿರುವುದು ವರದಿಯಾಗಿದೆ.
ರಾಜಾಸ್ಥಾನ ಮೂಲದ ಅಶೋಕ್ (28) ಮತ್ತು ಮೋಹನ್ ಲಾಲ್(32) ಮೃತಪಟ್ಟವರು. ಇವರು ಸಂಚರಿಸುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಗೆ ಢಿಕ್ಕಿಯಾಗಿದೆ ಎಂದು ತಿಳಿದುಬಂದಿದೆ.
ಘಟನಾ ಸ್ಥಳಕ್ಕೆ ಮಾಲೂರು ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು.







