ರಾಜ್ಯ ಕಾಂಗ್ರೆಸ್ ಸರಕಾರ ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ: ವಿಜಯೇಂದ್ರ ಆರೋಪ

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ (File Photo)
ಕೋಲಾರ: ರಾಜ್ಯಾದ್ಯಂತ ಮಳೆಯ ಕೊರತೆಯಿಂದ ತೀವ್ರ ಬರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕೋಲಾರ, ಚಿಕ್ಕಬಳ್ಳಾಪುರ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬಿತ್ತನೆ ಮಾಡಿದ್ದರೂ ಕೈಗೆ ಬೆಳೆ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಟೊಮ್ಯಾಟೊ, ಮಾವು ಸೇರಿದಂತೆ ವಿವಿಧ ಬೆಳೆಗಳ ಬೆಳೆಗಾರರು ತೀವ್ರ ಸಂಕಷ್ಟ ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಬೇಕಾದ ಕಾಂಗ್ರೆಸ್ ಸರಕಾರ ರೈತರ ಸಮಸ್ಯೆಗಳನ್ನು ನಿರ್ಲಕ್ಷಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಆರೋಪಿಸಿದ್ದಾರೆ.
ಕೋಲಾರ ಹೊರವಲಯದ ರತ್ನ ಕನ್ವೆನ್ಷನ್ ಹಾಲ್ನಲ್ಲಿ ಆಗ್ನೇಯ ಪದವೀಧರ ಕ್ಷೇತ್ರದ ಎನ್ಡಿಎ ಅಭ್ಯರ್ಥಿ ಕೆ.ಎಂ. ಸುರೇಶ್ ಅವರ ಚುನಾವಣಾ ಪೂರ್ವಭಾವಿ ಸಭೆಯ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ವಿವಿಧ ಭಾಗಗಳಿಗೆ ಈಗಾಗಲೇ ಪ್ರವಾಸ ಕೈಗೊಂಡಿದ್ದು, ರೈತರ ವಾಸ್ತವ ಸ್ಥಿತಿಯನ್ನು ಸ್ವತಃ ಗಮನಿಸಿದ್ದೇನೆ ಎಂದರು. ರೈತರ ಸಂಕಷ್ಟಕ್ಕೆ ತಕ್ಷಣ ಪರಿಹಾರ ನೀಡಲಿ
ರಾಜ್ಯದಲ್ಲಿ ಬರದ ಪರಿಸ್ಥಿತಿ ತೀವ್ರವಾಗಿರುವ ಹಿನ್ನೆಲೆಯಲ್ಲಿ ರೈತರಿಗೆ ತಕ್ಷಣ ಪರಿಹಾರ ಮತ್ತು ಅಗತ್ಯ ನೆರವು ನೀಡಬೇಕಾದ ಜವಾಬ್ದಾರಿ ರಾಜ್ಯ ಸರ್ಕಾರದ್ದಾಗಿದೆ. ಕೇಂದ್ರ ಸರ್ಕಾರದ ನೆರವು ಕೇಳುವುದಕ್ಕೂ ಮುನ್ನ ರಾಜ್ಯ ಸರ್ಕಾರ ತನ್ನ ಜವಾಬ್ದಾರಿಯನ್ನು ನಿಭಾಯಿಸಬೇಕು ಎಂದು ವಿಜಯೇಂದ್ರ ಒತ್ತಾಯಿಸಿದರು.
ರೈತರು ಬೆಳೆ ಇಲ್ಲದೆ ಸಂಕಷ್ಟದಲ್ಲಿದ್ದಾರೆ. ಸಾಲದ ಹೊರೆ ಹೆಚ್ಚಾಗಿದೆ. ಇಂತಹ ಸಂದರ್ಭದಲ್ಲಿ ರೈತರ ಸಾಲಮನ್ನಾ ಸೇರಿದಂತೆ ಅಗತ್ಯ ಪರಿಹಾರ ಕ್ರಮಗಳ ಬಗ್ಗೆ ಸರ್ಕಾರ ಯಾವುದೇ ಸ್ಪಷ್ಟ ನಿರ್ಧಾರ ಕೈಗೊಂಡಿಲ್ಲ. ಸಚಿವರು ಮತ್ತು ಶಾಸಕರು ದಿಲ್ಲಿ ಪ್ರವಾಸ ಹಾಗೂ ರಾಜಕೀಯ ಚಟುವಟಿಕೆಗಳಿಗೆ ನೀಡುವ ಸಮಯವನ್ನು ರೈತರ ಸಂಕಷ್ಟ ಪರಿಹಾರಕ್ಕೆ ನೀಡಬೇಕಿತ್ತು ಎಂದು ಅವರು ಟೀಕಿಸಿದರು.
“ಕೇಂದ್ರ ಸರ್ಕಾರವನ್ನು ಕೇಳುವುದಕ್ಕೂ ಮುನ್ನ ರಾಜ್ಯ ಸರ್ಕಾರ ರೈತರಿಗೆ ಪರಿಹಾರ ಘೋಷಿಸಲಿ. ಮೊದಲು ರಾಜ್ಯ ಸರ್ಕಾರ ತನ್ನ ಜವಾಬ್ದಾರಿ ನಿರ್ವಹಿಸಿ, ನಂತರ ಕೇಂದ್ರ ಸರ್ಕಾರದ ನೆರವು ಕೇಳಲಿ. ತಡ ಮಾಡದೆ ಮುಖ್ಯಮಂತ್ರಿ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಬೇಕು,” ಎಂದು ವಿಜಯೇಂದ್ರ ಆಗ್ರಹಿಸಿದರು.
ರಾಜ್ಯಾದ್ಯಂತ ಜನಾಂದೋಲನ
ಕಾಂಗ್ರೆಸ್ ಸರ್ಕಾರದ ನೀತಿಗಳಿಂದ ಬಡವರ ಬದುಕಿನ ಮೇಲೆ ಮತ್ತಷ್ಟು ಹೊರೆ ಬೀಳುತ್ತಿದೆ. ಪಡಿತರ ಚೀಟಿಗಳಿಗೂ ಕತ್ತರಿ ಹಾಕುವ ಮೂಲಕ ಬಡವರ ಹೊಟ್ಟೆಯ ಮೇಲೆ ಹೊಡೆಯುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ವಿಜಯೇಂದ್ರ ಆಕ್ರೋಶ ವ್ಯಕ್ತಪಡಿಸಿದರು.
ರೈತರು, ಬಡವರು, ಹೈನುಗಾರರು ಹಾಗೂ ಯುವಕರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸದಿದ್ದರೆ ಬಿಜೆಪಿ ರಾಜ್ಯಾದ್ಯಂತ ಜನಾಂದೋಲನ ನಡೆಸಲಿದೆ. ಸರ್ಕಾರದ ಜನವಿರೋಧಿ ನೀತಿಗಳ ವಿರುದ್ಧ ಜನರ ಧ್ವನಿಯಾಗಿ ಬಿಜೆಪಿ ಹೋರಾಟ ನಡೆಸಲಿದೆ ಎಂದು ಅವರು ಎಚ್ಚರಿಸಿದರು.
ರೈತರು ಮತ್ತು ಜನಸಾಮಾನ್ಯರ ಸಮಸ್ಯೆಗಳಿಗೆ ಆದ್ಯತೆ ನೀಡುವ ಬದಲು ಸರ್ಕಾರ ರಿಯಲ್ ಎಸ್ಟೇಟ್ ಯೋಜನೆಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ ಎಂದವರು ಆರೋಪಿಸಿದರು.
*ಬಿಡದಿ ಟೌನ್ಶಿಪ್: ರೈತರ ಹೋರಾಟಕ್ಕೆ ಬಿಜೆಪಿ–ಜೆಡಿಎಸ್ ಬೆಂಬಲ
ಬಿಡದಿ ಟೌನ್ಶಿಪ್ ಯೋಜನೆಗೆ ಸಂಬಂಧಿಸಿದಂತೆ ರೈತರ ಜಮೀನುಗಳನ್ನು ಬಲವಂತವಾಗಿ ಪಡೆದುಕೊಳ್ಳುವ ಪ್ರಯತ್ನ ನಡೆಯುತ್ತಿದೆ ಎಂಬ ಆರೋಪಗಳ ಕುರಿತು ಪ್ರತಿಕ್ರಿಯಿಸಿದ ವಿಜಯೇಂದ್ರ, ರೈತರನ್ನು ಹೆದರಿಸಿ ಹಾಗೂ ಒತ್ತಡ ಹೇರಿ ಜಮೀನುಗಳನ್ನು ಬಿಡಿಸುವ ಯಾವುದೇ ಪ್ರಯತ್ನವನ್ನು ಬಿಜೆಪಿ ಸಹಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಜಿಡಿಎಸ್ ನಡೆಸುತ್ತಿರುವ ಪಾದಯಾತ್ರಗೆ ನಮ್ಮ ವಿಪಕ್ಷ ನಾಯಕರಾದ ಆರ್. ಅಶೋಕ್ ಹಾಗೂ ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಭಾಗಿಯಾಗಿದ್ದಾರೆ ಈ ಹೋರಾಟವನ್ನು ಆರಂಭಿಸಿರುವುದು ರೈತರೇ. ರೈತರ ಪರವಾಗಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಬೆಂಬಲವಾಗಿ ನಿಲ್ಲಲಿವೆ ಎಂದು ಅವರು ತಿಳಿಸಿದರು.
ರೈತರ ಜಮೀನು ಕಬಳಿಸಲು ಮುಂದಾದರೆ ರಾಜ್ಯಾದ್ಯಂತ ಹೋರಾಟ
ರೈತರು ತಮ್ಮ ಜಮೀನುಗಳನ್ನು ಮಾರಾಟ ಮಾಡಬಾರದು ಎಂದು ಒಂದು ಕಡೆ ಸರ್ಕಾರ ಹೇಳುತ್ತದೆ. ಮತ್ತೊಂದೆಡೆ ರೈತರ ಜಮೀನುಗಳನ್ನೇ ಕಬಳಿಸಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ರೈತರ ಜಮೀನುಗಳ ಮೇಲೆ ಯಾವುದೇ ರೀತಿಯ ದಬ್ಬಾಳಿಕೆ ನಡೆದರೆ ಬಿಜೆಪಿ ಅದನ್ನು ಸಹಿಸುವುದಿಲ್ಲ ಎಂದು ವಿಜಯೇಂದ್ರ ಎಚ್ಚರಿಸಿದರು. “ರೈತರ ಜಮೀನುಗಳನ್ನು ಕಬಳಿಸುವ ಪ್ರಯತ್ನ ಮುಂದುವರಿದರೆ ರೈತರು ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ” ಎಂದು ಅವರು ಹೇಳಿದರು.






