ಕೊಪ್ಪಳದ ಕಾಂಗ್ರೆಸ್ ನಾಯಕರು ನನಗೆ ಮೋಸ ಮಾಡಿದ್ದಾರೆ: ಇಕ್ಬಾಲ್ ಅನ್ಸಾರಿ ಆಡಿಯೋ ವೈರಲ್

ಕೊಪ್ಪಳ: ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ, ಸಂಸದ ರಾಜಶೇಖರ ಹಿಟ್ನಾಳ್, ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮತ್ತು ಯಲಬುರ್ಗಾ ಶಾಸಕ ಹಾಗೂ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಮೋಸಗಾರರು, ಕಾಂಗ್ರೆಸ್ ಹೈಕಮಾಂಡ್ ಮುಂದೆ ಸುಳ್ಳು ಹೇಳಿ ಜನತೆಗೆ ಮತ್ತು ತನಗೆ ಮೋಸ ಮಾಡಿದ್ದಾರೆ ಎಂದು ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಆರೋಪಿಸಿದ್ದಾರೆ.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅವರದ್ದು ಎನ್ನಲಾದ ಆಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇಂದು( ಅ.6) ಮುಖ್ಯಮಂತ್ರಿ ಕೊಪ್ಪಳಕ್ಕೆ ಆಗಮಿಸುವ ದಿನವೇ ಜಿಲ್ಲೆಯ ಕಾಂಗ್ರೆಸ್ ನಾಯಕರು ಮತ್ತು ಜನಪ್ರತಿನಿಧಿಗಳ ಬಗ್ಗೆ ಅಸಮಾಧಾನ ಹೊರ ಹೊರಹಾಕಿದ್ದಾರೆ.
ಆಡಿಯೋದಲ್ಲಿ ಏನಿದೆ?
ಹಿಟ್ನಾಳ್ ಕುಟುಂಬದ ಸಂಸದರು, ಶಾಸಕರು, ಕನಕಗಿರಿ ಕ್ಷೇತ್ರದಿಂದ ಗೆದ್ದು ಸಚಿವರಾಗಿರುವ ಶಿವರಾಜ ತಂಗಡಗಿ, ಮತ್ತು ಸಿಎಂ ಆರ್ಥಿಕ ಸಲಹೆಗಾರ ರಾಯರೆಡ್ಡಿ ಅವರು ಮುಖ್ಯಮಂತ್ರಿ ಮತ್ತು ಕಾಂಗ್ರೆಸ್ ಹೈಕಮಾಂಡ್ಗೆ ಜಿಲ್ಲೆಯಲ್ಲಿ ನಡೆಯುವ ಸತ್ಯ ಸಂಗತಿಗಳನ್ನು ಮರೆಮಾಚಿ ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಲಾಗಿದೆ.
ಕೊಪ್ಪಳದಲ್ಲಿ ಇಂದು(ಅ.6) ನಡೆಯುತ್ತಿರುವ ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಗಂಗಾವತಿಯಿಂದ 200ಕ್ಕೂ ಅಧಿಕ ಬಸ್ ಗಳನ್ನು ಬಿಡಲಾಗಿದೆ. ನನ್ನ ಗುಂಪಿನ ನಾಯಕರು ಬಸ್ಸಿನಲ್ಲಿ ಜನರನ್ನು ಕಳುಹಿಸುತ್ತಿದಾರೆ. ಆದರೆ, ಕಾಂಗ್ರೆಸ್ ಪಕ್ಷದಿಂದ ಗೆದ್ದವರು ಅನ್ಸಾರಿ ಜನರನ್ನು ಕಳಿಸಿಲ್ಲ ಎಂದು ಸಿಎಂ ಅವರಿಗೆ ಹೇಳುತ್ತಾರೆ. ಸಂಸದ ರಾಜಶೇಖರ ಹಿಟ್ನಾಳ ಗಂಗಾವತಿಯಿಂದ ಜನರನ್ನು ಸೇರಿಸಿದ್ದಾನೆಂದು ರೀಲ್ ಹಾಕುತ್ತಾರೆ. ಕೊಪ್ಪಳ ಜಿಲ್ಲೆಯಲ್ಲಿ ಕಳೆದ ಎರಡು ವರ್ಷಗಳಿಂದ ಇದೇ ರೀತಿ ರೀಲ್ ಹಾಕುತ್ತಿದ್ದಾರೆ. ಈ ನಾಯಕರು, ಗೆದ್ದ ಬಳಿಕ ಜನರಿಗೆ ಮೋಸ ಮಾಡುತ್ತಿದಾರೆ.
ಕೊಪ್ಪಳ ಜಿಲ್ಲೆಯ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಬರುತ್ತಿರುವ ಮುಖ್ಯಮಂತ್ರಿಗಳ ಸಾಧನ ಸಮಾವೇಶಕ್ಕೆ ಪ್ರತಿಯೊಂದು ಗ್ರಾಮದ ಫಲಾನುಭವಿಗಳನ್ನು ನಮ್ಮ ಬೆಂಬಲಿಗ ಕಾರ್ಯಕರ್ತರು ಕರೆದುಕೊಂಡು ಹೋಗಬೇಕು. ಮುಖ್ಯಮಂತ್ರಿ ರಾಜ್ಯದ ಜನತೆಗೆ ಐದು ಗ್ಯಾರಂಟಿಗಳನ್ನು ನೀಡುವ ಮೂಲಕ ಅತ್ಯುತ್ತಮ ಯೋಜನೆಗಳನ್ನು ಜಾರಿ ಮಾಡಿದ್ದಾರೆ. ಮುಖ್ಯಮಂತ್ರಿಗಳ ಐದು ಗ್ಯಾರಂಟಿ ಗಿನ್ನೆಸ್ ದಾಖಲೆಯಾಗಿದೆ. ಇದನ್ನು ನಾವೆಲ್ಲರು ತುಂಬು ಹೃದಯದಿಂದ ಸ್ವಾಗತಿಸಿ ಮುಖ್ಯಮಂತ್ರಿಯ ಕಾರ್ಯಕ್ರಮವನ್ನು ಸ್ವಾಗತಿಸುತ್ತೇನೆ. ಆದರೆ ಕೊಪ್ಪಳ ಜಿಲ್ಲೆಯ ಸಚಿವ, ಸಂಸದ, ಶಾಸಕ ಮತ್ತು ಆರ್ಥಿಕ ಸಲಹೆಗಾರ ಮಾಡಿರುವ ಮೋಸವನ್ನು ಸಹಿಸುವುದಿಲ್ಲ. ಅವರು ನನ್ನ ಬಗ್ಗೆ ಮುಖ್ಯಮಂತ್ರಿ ಬಳಿ ಸುಳ್ಳಿನ ಕಂತೆ ಹೆಣೆಯುತ್ತಿದ್ದಾರೆ.
ಸಂಸದ ರಾಜಶೇಖರ ಹಿಟ್ನಾಳ್ ಪರ ಚುನಾವಣೆಯಲ್ಲಿ ಕೆಲಸ ಮಾಡುವ ಮನಸ್ಸು ನನಗೆ ಇದ್ದಿಲ್ಲ. ಆದರೆ ಮುಖ್ಯಮಂತ್ರಿಯವರ ಮಾತಿಗೆ ನಾನು ಬೆಲೆ ಕೊಟ್ಟು ಗಂಗಾವತಿಯಲ್ಲಿ 16 ಸಾವಿರ ಮತಗಳ ಲೀಡ್ ಆಗುವಂತೆ ಕೆಲಸ ಮಾಡಿದ್ದಾರೆ. ಆದರೆ ಗೆದ್ದ ನಂತರ ಹಿಟ್ನಾಳ್ ಸಹೋದರರು, ಇವರೊಂದಿಗೆ ಸಚಿವ ಹಾಗೂ ರಾಯರೆಡ್ಡಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷರ ಮುಂದೆ ನನ್ನ ವಿರುದ್ಧ ಕ್ಯಾಸೆಟ್ ಹಾಕುತ್ತಾರೆ. ಗಂಗಾವತಿ ಕ್ಷೇತ್ರದ ವಿಧಾನಸಭೆ ಚುನಾವಣೆಯಲ್ಲಿ ರೆಡ್ಡಿಯನ್ನು ಬೆಂಬಲಿಸಿ ನನ್ನ ವಿರುದ್ಧ ಮಸಲತ್ತು ಮಾಡಿದ್ದಾರೆ.
ಮುಂದಿನ ದಿನಗಳಲ್ಲಿ ಇವರ ಕುತಂತ್ರದ ಬಣ್ಣ ಬಯಲು ಮಾಡಲು ನಾನು ಸಿದ್ಧನಿದ್ದೇನೆ. ಮುಂದಿನ ದಿನಗಳಲ್ಲಿ ಕೇಲವ ಕೊಪ್ಪಳ ಜಿಲ್ಲೆಯಲ್ಲಿ ಮಾತ್ರ ಅಲ್ಲ, ರಾಜ್ಯಾದ್ಯಂತ ನಮ್ಮ ಬೆಂಬಲಿಗರು ಮತ್ತು ಮುಸ್ಲಿಮ್ ಸಮಾಜಕ್ಕೆ ಹಿಟ್ನಾಳ್ ಕುಟುಂಬ, ತಂಗಡಗಿ ಮತ್ತು ರಾಯರೆಡ್ಡಿ ಮಾಡಿರುವ ಮೋಸವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತೇನೆ. ಇಂದು ನಡೆಯುವ ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಜನತೆ ಮತ್ತು ಫಲಾನುಭವಿಗಳು ಹೋಗಿಬನ್ನಿ. ಆದರೆ ಜಿಲ್ಲೆಯ ಕಾಂಗ್ರೆಸ್ ಮುಖಂಡರನ್ನು ನಂಬಬೇಡಿ. ಜಿಲ್ಲೆಯ ಕಾಂಗ್ರೆಸ್ ಜನಪ್ರತಿನಿಧಿಗಳನ್ನು ಯಾವತ್ತು ನಂಬಬೇಡಿ ಎಂದು ಹೇಳಿದ್ದಾರೆ.
ಸಿಎಂ ಕಾರ್ಯಕ್ರಮಕ್ಕೆ ಹೋಗಿ ಬನ್ನಿ, ಆದರೆ ಕಾಂಗ್ರೆಸ್ ಮುಖಂಡರನ್ನು ನಂಬಬೇಡಿ
ಇಂದು ಕೊಪ್ಪಳದಲ್ಲಿ ನಡೆಯುತ್ತಿರುವ ಸಾಧನಾ ಸಮಾವೇಶದ ಮುಖ್ಯಮಂತ್ರಿಯ ಕಾರ್ಯಕ್ರಮಕ್ಕೆ ಪ್ರತಿಯೊಬ್ಬ ನನ್ನ ಬೆಂಬಲಿಗ ಕಾರ್ಯಕರ್ತರು ಹೋಗಿ ಬನ್ನಿ. ಆದರೆ ಕೊಪ್ಪಳ ಜಿಲ್ಲೆಯ ಕಾಂಗ್ರೆಸ್ ಪಕ್ಷದ ಸಂಸದ, ಶಾಸಕ, ಸಚಿವ ಹಾಗೂ ಸಿಎಂ ಆರ್ಥಿಕ ಸಲಹೆಗಾರನನ್ನು ನಂಬಬೇಡಿ. ಅವರೆಲ್ಲರೂ ಮೋಸಗಾರರು. ನನಗೆ ನೇರವಾಗಿ ಇವರೆಲ್ಲರೂ ಸೇರಿ ಮೋಸ ಮಾಡಿದ್ದಾರೆ. ಮತ್ತು ಇಂದಿನ ಕಾರ್ಯಕ್ರಮಕ್ಕೆ ನನಗೆ ಮಾಹಿತಿ ನೀಡಿಲ್ಲ ಎಂದು ಆಡಿಯೋದಲ್ಲಿ ಆರೋಪಿಸಲಾಗಿದೆ.
ಅವರು ಹಿರಿಯರು, ಮಾತನಾಡಲಿ: ತಂಗಡಗಿ
ತಮ್ಮ ವಿರುದ್ಧದ ಈ ವೈರಲ್ ಆಡಿಯೋ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿಯವರ ಗಮನಸೆಳೆದಾಗ, "ನಾನು ಆ ಆಡಿಯೋ ಕೇಳಿಲ್ಲ, ಅದನ್ನು ಕೇಳಿ ನಂತರ ಉತ್ತರಿಸುವೆ. ಅವರು ಏಕ ವಚನದಲ್ಲಿ ಮಾತನಾಡಿರಬಹುದು, ಅವರು ಹಿರಿಯರು ಮಾತನಾಡಲಿ" ಎಂದು ಪ್ರತಿಕ್ರಿಯಿಸಿದ್ದಾರೆ.
ಈ ವೈರಲ್ ಆಡಿಯೋ ಬಗ್ಗೆ ಪ್ರತಿಕ್ರಿಯೆಗಾಗಿ ಇಕ್ಬಾಲ್ ಅನ್ಸಾರಿಯವರನ್ನು 'ವಾರ್ತಾಭಾರತಿ' ಸಂಪರ್ಕಿಸಲು ಯತ್ನಿಸಿದರೂ ಅವರು ಸಂಪರ್ಕಕ್ಕೆ ಸಿಕ್ಕಿಲ್ಲ.







