ಕನಕಗಿರಿಯಲ್ಲಿ ಸಾರ್ವಜನಿಕರಿಗೆ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ವಿಫಲ: ಬಸವರಾಜ ದಡೇಸೂಗೂರು ಆರೋಪ

ಕನಕಗಿರಿ: ನಿವೇಶನ ಒತ್ತುವರಿ ವಿಚಾರವಾಗಿ ದೌರ್ಜನ್ಯಕ್ಕೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡ ಬಸವರಾಜರೆಡ್ಡಿ ಪ್ರಕರಣದಲ್ಲಿ ಎಫ್ಐಆರ್ ದಾಖಲಿಸದಂತೆ ಪೊಲೀಸರ ಮೇಲೆ ಸಚಿವ ಶಿವರಾಜ ತಂಗಡಗಿ ಮೂರು ದಿನಗಳಿಂದ ಒತ್ತಡ ಹೇರಿದ್ದಾರೆ ಎಂದು ಮಾಜಿ ಶಾಸಕ ಬಸವರಾಜ ದಡೇಸೂಗೂರು ಆರೋಪಿಸಿದ್ದಾರೆ.
ಕನಕಗಿರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕನಕಗಿರಿಯಲ್ಲಿ ಸಾರ್ವಜನಿಕರಿಗೆ ಸೂಕ್ತ ರಕ್ಷಣೆ ನೀಡುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ. ಸಚಿವರ ಒತ್ತಡಕ್ಕೆ ಮಣಿದು ಅಧಿಕಾರಿಗಳು ಪ್ರಕರಣ ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ದೂರಿದರು.
ಬಿಳೇಕುದರಿ ಕುಟುಂಬದವರು ಸಚಿವ ತಂಗಡಗಿಯವರನ್ನು ಭೇಟಿ ಮಾಡಿದ್ದಾರೆ. ಅದೇ ಕಾರಣಕ್ಕೆ ಪ್ರಕರಣವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆಯುತ್ತಿದೆ. ಕಾನೂನಿನ ಚೌಕಟ್ಟಿನಲ್ಲಿ ಮೃತನ ಕುಟುಂಬಕ್ಕೆ ತಕ್ಷಣ ನ್ಯಾಯ ಒದಗಿಸಬೇಕು ಎಂದವರು ಆಗ್ರಹಿಸಿದರು.
ಈ ವಿಷಯವನ್ನು ವಿಧಾನಸಭಾ ಅಧಿವೇಶನದಲ್ಲಿ ಪ್ರಸ್ತಾಪಿಸಲಾಗುವುದು. ನಮ್ಮ ಬಿಜೆಪಿ ರಾಜ್ಯ ನಾಯಕರ ಗಮನಕ್ಕೂ ತರುತ್ತೇನೆ ಎಂದರು.
ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಬಸವರಾಜ ಕ್ಯಾವಟರ್ ಮಾತನಾಡಿ, ಪೊಲೀಸರ ನಿರ್ಲಕ್ಷ್ಯದಿಂದಲೇ ಬಸವರಾಜರೆಡ್ಡಿಯವರ ಸಾವು ಸಂಭವಿಸಿದೆ. ಈ ಕುರಿತು ಪಕ್ಷದ ಹಿರಿಯ ನಾಯಕರಿಗೆ ವರದಿ ನೀಡುತ್ತೇನೆ. ಸದನದಲ್ಲಿ ಈ ಬಗ್ಗೆ ಚರ್ಚೆ ನಡೆಸಲು ನಮ್ಮ ಶಾಸಕರಿಗೆ ಸೂಚಿಸಿದ್ದೇನೆ ಎಂದು ಹೇಳಿದರು.






