ಜ. 22ರ ವಿಶೇಷ ಅಧಿವೇಶನದಲ್ಲಿ ಬಲ್ಡೋಟಾ ವಿರೋಧಿ ಹೋರಾಟ ಪ್ರಸ್ತಾಪ: ನಾರಾಯಣಸ್ವಾಮಿ

ಕೊಪ್ಪಳ: ಬಲ್ಡೋಟಾ ಹಾಗೂ ಇತರ ವಿಷಕಾರಕ ಕಾರ್ಖಾನೆಗಳ ವಿರೋಧಿ ಹೋರಾಟದ ವಿಚಾರವನ್ನು ಜನವರಿ 22ರಂದು ನಡೆಯುವ ವಿಶೇಷ ಅಧಿವೇಶನದಲ್ಲಿ ಪ್ರಸ್ತಾಪ ಮಾಡಿ ಸರಕಾರವನ್ನು ಎಚ್ಚರಿಸುವುದಾಗಿ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
ಇಲ್ಲಿನ ನಗರ ಮತ್ತು ಭಾಗ್ಯನಗರ ಹಾಗೂ 20 ಭಾದಿತ ಹಳ್ಳಿಗಳ ಸಮಸ್ಯೆಯನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಬಲ್ಡೋಟಾ ಹಾಗೂ ಇತರ ವಿಷಕಾರಕ ಕಾರ್ಖಾನೆಗಳ ವಿರುದ್ಧ ನಗರಸಭೆಯ ಮುಂದೆ ನಡೆಯುತ್ತಿರುವ ಪ್ರತಿಭಟನೆಯ 78ನೇ ದಿನವಾದ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿದ ಅವರು ಹೋರಾಟಕ್ಕೆ ಬೆಂಬಲ ನೀಡಿ ಮಾತನಾಡಿದರು.
ಬಸಾಪುರ ಕೆರೆ ಸಮುದಾಯದ ಆಸ್ತಿ, ಅದನ್ನು ಯಾವುದೇ ಸರಕಾರ ಕಟ್ಟಿಲ್ಲ. ಸರಕಾರ ಅದನ್ನು ಮಾರಲು ಬರುವುದಿಲ್ಲ. ಕೂಡಲೇ ಅದನ್ನು ತೆರವುಗೊಳಿಸಬೇಕು. ಈ ಕುರಿತು ಅಧಿವೇಶನದ ನಂತರವೂ ಕೂಡ ಹೋರಾಟ ಮುಂದುವರಿಸುವುದಾಗಿ ಹೇಳಿದರು.
ಜನರ ಆರೋಗ್ಯ ಬಹಳ ಮುಖ್ಯ ಸಿಎಂ ಹಾಗೂ ಉದ್ಯಮ ಸಚಿವರು ಕೇಂದ್ರದತ್ತ ಬೆಟ್ಟು ಮಾಡುತ್ತಿರುವುದು ಸರಿಯಲ್ಲ ಇವರು ರದ್ದುಗೊಳಿಸಬೇಕು, ಕೇಂದ್ರದಲ್ಲಿ ಏನಾದರೂ ಇದ್ದರೂ ಅದನ್ನು ನಾವೂ ಗಮನಿಸುತ್ತೇವೆ, ಆದರೆ ಈ ಹೋರಾಟಕ್ಕೆ ನಮ್ಮ ಬೆಂಬಲ ಇದೆ ಎಂದರು.
ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ನೇತೃತ್ವದಲ್ಲಿ ನಡೆಯುತ್ತಿರುವ ಅನಿರ್ದಿಷ್ಟ ಧರಣಿ ಹೋರಾಟ 78ನೇ ದಿನದಲ್ಲಿ ಮುಂದುವರಿಯಿತು. ಈ ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದೇವೆ, ಜನಪ್ರತಿನಿಧಿಗಳು ಗವಿಮಠದ ಪೂಜ್ಯರಿಗೆ ಅವಮಾನ ಮಾಡಬಾರದು, ಅವರು ಈ ಭಾಗದ ದಿವ್ಯ ಶಕ್ತಿ, ಅವರಿಗೆ ನೋವು ಮಾಡಬೇಡಿ ಎಂದು ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು ಹೇಳಿದರು.
ಧರಣಿಯಲ್ಲಿ ನಿವೃತ್ತ ಪ್ರಾಚಾರ್ಯರು ಬಿ.ಜಿ. ಕರಿಗಾರ, ಸಂಚಾಲಕರಾದ ಮಲ್ಲಿಕಾರ್ಜುನ ಬಿ. ಗೋನಾಳ, ಎಸ್.ಬಿ. ರಾಜೂರು, ಶಂಭುಲಿಂಗಪ್ಪ ಹರಗೇರಿ, ಜಿ. ಬಿ. ಪಾಟೀಲ್, ಮಂಜುನಾಥ ಜಿ. ಗೊಂಡಬಾಳ, ರಾಜೇಶ ಸಸಿಮಠ, ಬಿಜೆಪಿ ಮುಖಂಡರಾದ ಡಾ. ಬಸವರಾಜ ಕ್ಯಾವಟರ್, ಗಣೇಶ ಹೊರತಟ್ನಾಳ, ಕನಕಪ್ಪ ಚಲುವಾದಿ, ಪಿಎಲ್ ಡಿ ಬ್ಯಾಂಕ್ ಅಧ್ಯಕ್ಷ ಗ್ಯಾನೇಶ, ಕನಕಮೂರ್ತಿ ಚಲುವಾದಿ, ರವಿ ಕಾಂತನವರ, ಎ. ಎಂ. ಮದರಿ, ಕಾಶಪ್ಪ ಚಲುವಾದಿ, ವಿಜಯ ಮಹಾಂತೇಶ ಹಟ್ಟಿ, ಕಲ್ಲಮ್ಮ ರ್ಯಾವಣಕಿ, ಶಿವಾನಂದ ಬಡಿಗೇರ, ಶಾಂತಮ್ಮ, ಈರಮ್ಮ ಉಂಡಿ, ಈರಣ್ಣ ವಾಲಿ, ಶಿವಪ್ಪ ಜಲ್ಲಿ, ಮಕ್ಬೂಲ್ ರಾಯಚೂರು ಮತ್ತಿತರರು ಭಾಗವಹಿಸಿದ್ದರು.







