ಕೊಪ್ಪಳ | ದಲಿತರ ಕಾಲನಿಯಲ್ಲಿ ಮನೆ ಕಟ್ಟಲು ಅಡ್ಡಿ ಆರೋಪ; 48 ಗಂಟೆಗಳ ಅಹೋರಾತ್ರಿ ಧರಣಿ

ಕೊಪ್ಪಳ/ ಕನಕಗಿರಿ: ತಾಲೂಕಿನ ನವಲಿ ಗ್ರಾಮದ ಪರಿಶಿಷ್ಟ ಜಾತಿಯ ಕಾಲನಿಯಲ್ಲಿ ತಮ್ಮ ಮನೆ ಕಟ್ಟಲು ಅಧಿಕಾರಿಗಳು ಅವಕಾಶ ಕೊಡುತ್ತಿಲ್ಲ, ತಾಲೂಕು ಮಟ್ಟದ ಅಧಿಕಾರಿಗಳ ಮೂಲಕ ಮನೆ ನಿರ್ಮಾಣದ ಕೆಲಸವನ್ನು ಸ್ಥಗಿತಗೊಳಿಸಲಾಗಿದೆ. ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಬೆಂಬಲ ಇದೆ ಎಂದು ದೂರಿ ವೀರೇಶ ನಾಗವಂತಿ ಕುಟುಂಬ ಶುಕ್ರವಾರ ಆಯೋಜಿಸಿದ್ದ ಪ್ರತಿಭಟನೆಗೆ ಬಿಜೆಪಿ ಮಂಡಲ ಅಧ್ಯಕ್ಷರು, ಮುಖಂಡರು, ಕಾರ್ಯಕರ್ತರು ಹಾಗೂ ಕೆಲ ದಲಿತ ಸಂಘಟನೆಗಳ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.
ಗ್ರಾಮದ ಮಾಕಣ್ಣ ಕಂಬಿ ವೃತ್ತದಲ್ಲಿ ಆಯೋಜಿಸಿದ್ದ 48 ಗಂಟೆಗಳ ನಿರಂತರ ಧರಣಿಗೆ ಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಲಾಯಿತು.
ದಲಿತರ ಕಾಲನಿಯಲ್ಲಿರುವ ಪ್ರತಿಯೊಂದು ಮನೆಗಳು ಅಕ್ರಮವಾಗಿಯೇ ನಿರ್ಮಾಣ ಮಾಡಿದ್ದು ಜನರು ಅಲ್ಲಿಯೇ ವಾಸಿಸುತ್ತಿದ್ದಾರೆ. ನಾಗವಂಶಿ ಅವರು ಮನೆ ಕಟ್ಟಲು ಆರಂಭಿಸಿದ್ದು ಅಧಿಕಾರಿಗಳ ಮೂಲಕ ತಂಗಡಗಿ ಹಾಗೂ ಸ್ಥಳೀಯ ಕೆಲವರು ಅಡ್ಡಿಪಡಿಸುತ್ತಿದ್ದಾರೆ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.
ವೀರೇಶ ನಾಗವಂಶಿ, ಪ್ರಗತಿಪರ ಚಿಂತಕ ಲಿಂಗರಾಜ ಹೂಗಾರ, ಬಿಜೆಪಿ ನಿಕಟಪೂರ್ವ ಅಧ್ಯಕ್ಷ ಜಡಿಯಪ್ಪ ಮುಕ್ಕುಂದಿ, ಬಿಜೆಪಿ ಮಂಡಲ ಅಧ್ಯಕ್ಷರಾದ ಸಣ್ಣ ಕನಕಪ್ಪ, ಮಂಜುನಾಥ ಮಸ್ಕಿ, ಉಪಾಧ್ಯಕ್ಷ ನಿಂಗಪ್ಪ ನವಲಿ, ಕೆಡಿಪಿ ಮಾಜಿ ಸದಸ್ಯ ಗುರುಮೂರ್ತಿ, ದಲಿತ ಸಂಘಟನೆಯ ಯಲ್ಲಪ್ಪ ಕಟ್ಟಿಮನಿ ಇತರರು ಮಾತನಾಡಿದರು.
ಭೀಮನಗೌಡ ಹರ್ಲಾಪುರ, ಮಹಾಂತೇಶ ಸಜ್ಜನ್, ಹನುಮಂತ ಬಸರಿಗಿಡದ, ರಮೇಶ ಕಂಬ್ಳೆ, ನಾಗೇಶ ಪರಂಗಿ ಮತ್ತಿತರರು ಭಾಗವಹಿಸಿದ್ದರು. ವಿವಿಧ ಕಲಾವಿದರು ಕ್ರಾಂತಿ ಗೀತೆಗಳನ್ನು ಹಾಡಿ ಗಮನ ಸೆಳೆದರು.







