ಹಲವು ಕಾರ್ಖಾನೆಗಳಿದ್ದರೂ ಕೊಪ್ಪಳ ಜಿಲ್ಲೆ ಅಭಿವೃದ್ಧಿ ಸೂಚ್ಯಂಕದಲ್ಲಿ ಹಿಂದೆ : ನಾಗೇಶ ಹೆಗಡೆ

ಕೊಪ್ಪಳ : ಪ್ರಾಕೃತಿಕವಾಗಿ ಶ್ರೀಮಂತವಾಗಿರುವ ಕೊಪ್ಪಳ ಜಿಲ್ಲೆಯಲ್ಲಿ ಎರಡ್ಮೂರು ದಶಕಗಳ ಹಿಂದಿನಿಂದಲೂ ಹೇರಳ ಕಾರ್ಖಾನೆಗಳಿವೆ. ಆ ಕಾರ್ಖಾನೆಗಳಿಂದ ಸ್ಥಳೀಯರಿಗೆ ಆದ ಲಾಭವೇನು? ಎನ್ನುವ ಪ್ರಶ್ನೆ ಕೇಳಿಕೊಂಡಾಗ ನಿರಾಸೆಯೇ ಹೆಚ್ಚಾಗುತ್ತದೆ. ರಾಜ್ಯದ ಅಭಿವೃದ್ಧಿ ಸೂಚ್ಯಂಕದಲ್ಲಿಯೂ ಈ ಜಿಲ್ಲೆ ಹಿಂದುಳಿದಿದೆ ಎಂದು ಪರಿಸರ ಬರಹಗಾರ ನಾಗೇಶ ಹೆಗಡೆ ಬೇಸರ ವ್ಯಕ್ತಪಡಿಸಿದರು.
ನಗರದ ಸಮೀಪದಲ್ಲಿ ಬಲ್ಡೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (ಬಿಎಸ್ಪಿಎಲ್) ಕಂಪನಿ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆ ಸ್ಥಾಪನೆಗೆ ಮುಂದಾಗಿದ್ದನ್ನು ಖಂಡಿಸಿ ಕೊಪ್ಪಳ ಜಿಲ್ಲಾ ಬಚಾವೊ ಆಂದೋಲನ ಸಮಿತಿ ಇಲ್ಲಿನ ಸಾಹಿತ್ಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಖಾನೆಗಳಿಂದ ಪರಿಸರದ ಮೇಲೆ ಆಗಿರುವ ದುಷ್ಪರಿಣಾಮಗಳ ವಿಚಾರ ಸಂಕಿರಣದಲ್ಲಿ ಅವರು ವರ್ಚುವಲ್ ಮೂಲಕ ಮಾತನಾಡಿದರು.
ಜಿಲ್ಲೆಯಲ್ಲಿ ಸಾಕಷ್ಟು ಕಾರ್ಖಾನೆಗಳು ಇವೆ. ರಾಜ್ಯದ ಭತ್ತದ ಕಣಜವೆಂದು ಹೆಸರು ಮಾಡಿದ್ದು, ಅಕ್ಕಿಯನ್ನೂ ಬೆಳೆಯಲಾಗುತ್ತಿದೆ. ಹಾಗಿದ್ದರೂ ಯಾಕೆ ಜಿಲ್ಲೆ ಅಭಿವೃದ್ಧಿಯಾಗುತ್ತಿಲ್ಲ? ಹೊರಗಿನವರ ಬಂದು ನಿಮ್ಮ ಪ್ರಾಕೃತಿಕ ಸಂಪನ್ಮೂಲ ಬಳಸಿಕೊಂಡು ವಿಷಮಯ ಸ್ಥಿತಿಯನ್ನು ನಿಮಗೆ ಬಿಟ್ಟು ಹೋಗುತ್ತಿದ್ದಾರೆ. ಈಗಿನ ಆತಂಕದ ಪರಿಸ್ಥಿತಿಯಲ್ಲಿ ಎಲ್ಲರೂ ಒಂದಾಗಿದ್ದೀರಿ. ಅಭಿವೃದ್ಧಿ ಸೂಚ್ಯಂಕದಲ್ಲಿ ಕೊಪ್ಪಳ ಜಿಲ್ಲೆ 25ನೇ ಸ್ಥಾನದಲ್ಲಿದೆ. ಅಸಮಾನತೆ ಅಂತರ ಹೆಚ್ಚಿದೆ. ನೀವು ಬೆಳೆದ ಭತ್ತ ಊಟ ಮಾಡಲು ನಿಮಗೇ ಸಿಗುತ್ತಿಲ್ಲ ಎಂದು ಹೇಳಿದರು.
ಪರಮಾಣು ಸ್ಥಾವರ ಸ್ಥಾಪಿಸಲು ಭೂಮಿ ನೋಡಲಾಗುತ್ತಿದೆ ಎನ್ನುವ ಆತಂಕ ಜಿಲ್ಲೆಯ ಜನರಲ್ಲಿದ್ದು, ಸ್ಥಾವರ ಸ್ಥಾಪನೆ ಬಗ್ಗೆ ನನಗೆ ಅನುಮಾನವಿದೆ. ಒಂದು ವೇಳೆ ಸ್ಥಾಪನೆ ನಿಜವೇ ಆಗಿದ್ದರೆ ಕೊಪ್ಪಳ ಮಾತ್ರವಲ್ಲ, ಸುತ್ತಮುತ್ತಲಿನ ಎಲ್ಲ ಜಿಲ್ಲೆಗಳ ಜನರೂ ಹೋರಾಟ ಮಾಡಬೇಕು. ಬಹಳಷ್ಟು ಕಂಪನಿಗಳು ಕೊಪ್ಪಳವನ್ನು ರಂಗಸ್ಥಳವನ್ನಾಗಿ ಮಾಡಿಕೊಂಡು ಕಾರ್ಖಾನೆ ಆರಂಭಿಸುತ್ತಿದ್ದು, ಇದಕ್ಕೆ ಜಿಲ್ಲೆಯ ಜನ ಬಲಿಪಶುವಾಗುತ್ತಿದ್ದಾರೆ ಎಂದರು.
ಕೃಷಿ ತಜ್ಞ, ಆಕಾಶವಾಣಿಯ ನಿವೃತ್ತ ಅಧಿಕಾರಿ ಹೇಮಂತ ರಾಮಡಗಿ ಮಾತನಾಡಿ, ಪಂಚೇಂದ್ರಿಯಗಳು ಇಲ್ಲದ ಬಂಡವಾಳಶಾಯಿಗಳು ಹಣದ ಮೂಲಕ ನಮ್ಮನ್ನು ಕಡಿವಾಣ ಹಾಕುತ್ತಾರೆ. ದೂಳಿನ ಹಾವಳಿಯಿಂದ ಸಸ್ಯಗಳಲ್ಲಿ ದ್ಯುತಿ ಸಂಶ್ಲೇಷಣಾ ಕ್ರಿಯೆ ನಡೆಯುವುದಿಲ್ಲ. ದೂಳಿನಿಂದ ಸಸ್ಯಗಳಿಗೂ ಹಾನಿಯಾಗುತ್ತದೆ. ಆದರೆ ನಾವು ಮನುಷ್ಯನಿಗೆ ತೊಂದರೆಯಾಗುತ್ತದೆ ಎಂದಾಗ ಮಾತ್ರ ಎಚ್ಚರಗೊಳ್ಳುತ್ತೇವೆ ಎಂದರು. ಕಾರ್ಖಾನೆಗಳ ವಿರುದ್ಧದ ಹೋರಾಟದ ಕಿಚ್ಚು ದೊಡ್ಡಮಟ್ಟದಲ್ಲಿ ಇರಬೇಕು. ಕೇವಲ ಭಾಷಣ ಕೇಳಲು, ಹಾಡುಗಳನ್ನು ಹಾಡಲು ಮಾತ್ರ ಸೀಮಿತವಾಗಬಾರದು ಎಂದು ಸಲಹೆ ನೀಡಿದರು.
ವಿಚಾರ ಗೋಷ್ಠಿಯನ್ನು ತಮಟೆ ಭಾರಿಸಿ ಉದ್ಘಾಟಿಸಿದ ಕಾರ್ಖಾನೆಯಿಂದ ನೊಂದ, ಧೂಳಿನ ಹಾವಳಿಯಿಂದ ನೊಂದ ಬಗನಾಳ ಗ್ರಾಮದ ರೈತ ರಮೇಶ ಗೌಡ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ಹೋದಾಗ ಬದುಕಲು ಯೋಗ್ಯವಲ್ಲದ ಜಾಗದಲ್ಲಿ ನೀವು ಜೀವನ ನಡೆಸುತ್ತಿದ್ದೀರಿ ಎಂದು ವೈದ್ಯರು ಹೇಳಿದ್ದಾರೆ. ಜೀವ ಹಾಗೂ ಜೀವನ ಉಳಿಸಿಕೊಳ್ಳಬೇಕಾದರೆ ಕಾರ್ಖಾನೆಗಳ ವಿರುದ್ಧ ಹೋರಾಟ ಅನಿವಾರ್ಯ ಎಂದು ಅನಿಸಿಕೆ ವ್ಯಕ್ತಪಡಿಸಿದರು.
ಸ್ವಾಭಿಮಾನಿ ಮಹಿಳಾ ಸಂಚಲನದ ಜ್ಯೋತಿ ಎಂ.ಗೊಂಡಬಾಳ ಸಂವಿಧಾನ ಪೀಠಿಕೆ ಓದಿಸಿದರು, ಬಸವರಾಜ ಶೀಲವಂತರ ಸ್ವಾಗತಿಸಿದರು, ಡಿ.ಎಚ್.ಪೂಜಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಶರಣು ಗಡ್ಡಿ ನಿರೂಪಿಸಿದರು.
ವೇದಿಕೆ ಮೇಲೆ ಬಸವರಾಜ ಸೂಳಿಬಾವಿ, ಸೋಮರಡ್ಡಿ ಅಳವಂಡಿ, ಶರಣಪ್ಪ ಸಜ್ಜನ್, ನಜೀರಸಾಬ್ ಮೂಲಿಮನಿ, ಕಾಶಪ್ಪ ಛಲವಾದಿ, ಶರಣು ಶೆಟ್ಟರ್, ಶರಣು ಪಾಟೀಲ್, ಎಸ್.ಎ.ಗಫಾರ, ಕೆ.ಬಿ.ಗೋನಾಳ, ಟಿ.ರತ್ನಾಕರ, ರವೀಂದ್ರ ವಿ.ಕೆ., ಹನುಮಂತ ಹಳ್ಳಿಕೇರಿ, ರಮೇಶ ತುಪ್ಪದ, ಪಂಪಣ್ಣ ಪೂಜಾರ್, ಹನುಮೇಶ ಹೊಸಳ್ಳಿ ಅನೇಕರಿದ್ದರು.







