ಎಂಎಸ್‌ಪಿಎಲ್‌ನಿಂದ ಕೊಪ್ಪಳದಲ್ಲಿ ಮತ್ತೊಂದು ಬೃಹತ್ ಕಾರ್ಖಾನೆ
ಸರಕಾರದ ಒಪ್ಪಿಗೆಗೆ ಸಾರ್ವಜನಿಕರ ವಿರೋಧ
ಕೊಪ್ಪಳ : ಕೊಪ್ಪಳ ನಗರಕ್ಕೆ ಹೊಂದಿಕೊಂಡೇ ಇರುವ ಎಂಎಸ್‌ಪಿಎಲ್ ಕಾರ್ಖಾನೆಯಿಂದ ೫೪ ಸಾವಿರ ಕೋಟಿ ರೂ. ವೆಚ್ಚದಲ್ಲಿ ಸುಮಾರು ೧,೦೦೦ ಎಕರೆ ಭೂಮಿಯಲ್ಲಿ ಮತ್ತೊಂದು ಬೃಹತ್ ಕಾರ್ಖಾನೆ ಸ್ಥಾಪನೆಗೆ ಸರಕಾರ ಒಪ್ಪಿಗೆ ನೀಡಿದ್ದು ಇದಕ್ಕೆ ಸಾರ್ವಜನಿಕರಿಂದ ತೀವ್ರ ವಿರೋಧ ವ್ಯಕ್ತವಾಗುತ್ತಿದೆ.
ಈಗಾಗಲೇ ಜಿಲ್ಲೆಯಲ್ಲಿ ಸುಮಾರು 200ಕ್ಕೂ ಹೆಚ್ಚು ಕಾರ್ಖಾನೆಗಳಿದ್ದು, ನಗರದಿಂದ 10ರಿಂದ 15 ಕಿ.ಮೀ ದೂರದಲ್ಲೇ ಸುಮಾರು 40ಕ್ಕೂ ಹೆಚ್ಚು ಕಾರ್ಖಾನೆಗಳಿವೆ. ಇದರಿಂದ ದೂಳು ಸಹಿತ ವಾಯು ಮಾಲಿನ್ಯ ಉಂಟಾಗುತ್ತಿದ್ದು, ನಗರದ ಜನರು ನಿತ್ಯ ಕೆಮ್ಮು, ನೆಗಡಿ ಮತ್ತು ಅಸ್ತಮಾದಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ.
ಕಾರ್ಖಾನೆಗಳ ದೂಳು ಎಷ್ಟರ ಮಟ್ಟಿಗೆ ಇದೆ ಎಂದರೆ ಇಲ್ಲಿನ ಜಿಲ್ಲಾಡಳಿತ ಭವನವನ್ನು ನೋಡಿದರೆ ಸಾಕು. ಇಡೀ ಜಿಲ್ಲಾಡಳಿತ ಭವನ ದೂಳಿನಿಂದ ಕೂಡಿದೆ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ. ಹೀಗಿರುವಾಗ ಮತ್ತೊಂದು ಕಾರ್ಖಾನೆ ಸ್ಥಾಪಿಸಿ ಏನು ಸಾಧಿಸಲು ಹೊರಟಿದ್ದಾರೆ ಎಂದು ಸಾರ್ವಜಿನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಕೊಪ್ಪಳ ತಾಲೂಕಿನಲ್ಲಿರುವ ಸ್ಪಾಂಜ್ ಐರನ್, ಸಿಮೆಂಟ್, ಕೆಮಿಕಲ್ ಫರ್ಟಿಲೈಸರ್ ಮತ್ತು ಸ್ಟೀಲ್ ತಯಾರಿಕ ಕಾರ್ಖಾನೆಗಳಿದ್ದು, ಇವುಗಳಲ್ಲಿ ಬಹುತೇಕ ಕಾರ್ಖಾನೆಗಳು ಪರಿಸರ ಇಲಾಖೆಯ ನಿಯಮಗಳನ್ನು ಪಾಲಿಸುತಿಲ್ಲ. ಇವುಗಳಲ್ಲಿ 12 ಕಂಪನಿಗಳನ್ನು ಮುಚ್ಚಲು ಆದೇಶಿಸಲಾಗಿದೆ.
ಕಾರ್ಖಾನೆ ಸ್ಥಾಪಿಸುವ ಸಂದರ್ಭದಲ್ಲಿ ಸ್ಥಳೀಯ ಜನರಿಗೆ ಉದ್ಯೋಗ ನೀಡುತ್ತೇವೆ, ಜನರನ್ನು ಆರ್ಥಿಕವಾಗಿ ಸುಧಾರಿಸುತ್ತೇವೆ ಎಂದು ಹೇಳಿ ರೈತರು ಮತ್ತು ಜನರಿಂದ ಜಮೀನುಗಳನ್ನು ಖರೀದಿಸಲಾಯಿತು. ಕಾರ್ಖಾನೆ ಪ್ರಾರಂವಾದ ನಂತರ ಸ್ಥಳೀಯರಿಗೆ ಡಿ-ಗ್ರೂಪ್ ಹುದ್ದೆಗಳನ್ನು ನೀಡಿ ಮೂಗಿಗೆ ತುಪ್ಪ ಹಚ್ಚಲಾಯಿತು. ಉಳಿದ ಉನ್ನತ ಹುದ್ದೆಗಳನ್ನು ಹೊರ ರಾಜ್ಯದವರಿಗೆ ಧಾರೆ ಎರೆಯಲಾಯಿತು.ಈ ಕುರಿತು ಸಾಮಾಜಿಕ ಚಿಂತಕರು ಮತ್ತು ಪ್ರಗತಿಪರರು ಸೇರಿ ಕಾರ್ಖಾನೆ ಸ್ಥಾಪನೆ ವಿರುದ್ಧ ಹೋರಾಟವನ್ನು ಆರಂಭಿಸಲಿದ್ದು, ಹೊರಾಟದ ರೂಪು ರೇಷೆಗನ್ನು ಸಿದ್ಧಪಡಿಸಲಾಗುತ್ತಿದೆ.
ಇದರ ಬಗ್ಗೆ ವಿಪಕ್ಷ ನಾಯಕರು ಮಾತ್ರ ಮಾತನಾಡುತ್ತಿದ್ದು, ಆಡಳಿತಾರೂಢ ಪಕ್ಷದ ಸಂಸದ, ಸಚಿವರು ಮತ್ತು ಶಾಸಕರಿಂದ ಯಾವುದೇ ಹೇಳಿಕೆ ಬಂದಿಲ್ಲ.
ಸರಕಾರ ಕಾರ್ಖಾನೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿರಹುದು. ಆದರೆ ನಮ್ಮ ಜನರು ಕಾರ್ಖಾನೆ ಬೇಡ ಎನ್ನುತ್ತಿದ್ದಾರೆ. ನಮಗೆ ಕಾರ್ಖಾನೆಗಿಂತ ಜನರ ಆರೋಗ್ಯ ಮುಖ್ಯ.
-ಶ್ರೀನಿವಾಸ ಗುಪ್ತಾ, ಅಧ್ಯಕ್ಷರು ನಗರಾಭಿವೃದ್ಧಿ ಪ್ರಾಧಿಕಾರ-ಕೊಪ್ಪಳ
ಕಾರ್ಖಾನೆ ನಗರದ ಹತ್ತಿರವೇ ಇದೆ. ಇದರಿಂದ ಜನರ ಆರೋಗ್ಯ ಕೆಟ್ಟು ಹೋಗುತ್ತದೆ. ಈಗಾಗಲೇ ಇಲ್ಲಿ ಬಹಳಷ್ಟು ಕಾರ್ಖಾನೆಗಳಿದ್ದು, ಇವುಗಳಿಂದ ಸಾಕಷ್ಟು ತೊಂದರೆಗಳನ್ನು ಅನುಭವಿಸುತ್ತಿದ್ದೇವೆ.
-ರಫಿ ಸಾಬ್, ಸ್ಥಳೀಯ
ಈಗಾಗಲೇ ನಗರದಲ್ಲಿ ಸುಮಾರು ಕಾರ್ಖಾನೆಗಳಿದ್ದು, ಇದರಿಂದ ನಗರದಲ್ಲಿ ದೂಳು ಮತ್ತು ಹೊಗೆ ಕವಿದಿದೆ. ಇದರಿಂದ ಜನರು ಕೆಮ್ಮು, ಅಸ್ತಮಾ, ಮತ್ತು ಟಿಬಿಯಂತಹ ಕಾಯಿಲೆಗಳಿಂದ ಬಳಲುತ್ತಿದ್ದಾರೆ. ಆದ್ದರಿಂದ ನಾವು ಕಾರ್ಖಾನೆ ವಿಸ್ತರಣೆ, ವಿಶ್ವವಿದ್ಯಾನಿಲಯ ಮುಚ್ಚದಂತೆ ಮತ್ತು ಅಣುಸ್ಥಾವರ ನಿರ್ಮಾಣವನ್ನು ವಿರೋಧಿಸಿ ಹೋರಾಟ ನಡೆಸಲಿದ್ದೇವೆ.
-ಅಲ್ಲಮ ಪ್ರಭು ಬೆಟ್ಟದೂರು, ಪ್ರಗತಿ ಪರ ಚಿಂತಕರು







