ಬಲ್ಡೋಟ ತೊಲಗಿಸಿ ಕೊಪ್ಪಳ ಉಳಿಸಿ ಸಹಿ ಆಂದೋಲನಕ್ಕೆ ಬಸವರಾಜ ಬಳ್ಳೊಳ್ಳಿ ಚಾಲನೆ

ಕೊಪ್ಪಳ: ನಗರದ ನಗರಸಭೆ ವಾಣಿಜ್ಯ ಸಂಕೀರ್ಣದ ಮುಂಭಾಗದಲ್ಲಿ "ಬಲ್ಡೋಟಾ ತೊಲಗಿಸಿ ಕೊಪ್ಪಳ ಉಳಿಸಿ" ಎಂಬ ಪರಿಸರ ಜಾಗೃತಿ ಸಹಿ ಆಂದೋಲನಕ್ಕೆ ಚಾಲನೆ ನೀಡಲಾಯಿತು. ನಗರದ ಪ್ರಮುಖ ವಾಣಿಜ್ಯೋದ್ಯಮಿ ಬಸವರಾಜ ಬಳ್ಳೊಳ್ಳಿ ಅವರು ಸಹಿ ಮಾಡುವ ಮೂಲಕ ಆಂದೋಲನವನ್ನು ಉದ್ಘಾಟಿಸಿ ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.
ನಂತರ ನೆರೆದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕೊಪ್ಪಳ ನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಗೆ ಕಾರ್ಖಾನೆಗಳಿಂದ ಹೊರಬರುವ ವಿಷಾನಿಲ ಮತ್ತು ಕಂದು ಧೂಳು ವ್ಯಾಪಕವಾಗಿ ಹರಡುತ್ತಿದೆ. ಈ ಧೂಳು ನಮ್ಮ ಬಟ್ಟೆಗಳ ಮೇಲೆ ಬೀಳುತ್ತಿರುವುದನ್ನು ಮಾತ್ರ ನಾವು ಗಮನಿಸುತ್ತಿದ್ದೇವೆ, ಆದರೆ ನಮ್ಮ ಶ್ವಾಸಕೋಶದ ಮೂಲಕ ದೇಹದೊಳಗೆ ಸೇರುತ್ತಿರುವ ವಿಷಕಾರಿ ಅಂಶಗಳು ನಮ್ಮ ಆರೋಗ್ಯದ ಮೇಲೆ ಎಂತಹ ಭೀಕರ ಪರಿಣಾಮ ಬೀರುತ್ತಿವೆ ಎಂಬುದು ನಮಗೆ ಅರಿವಾಗುತ್ತಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.
ಗಂಭೀರ ರೋಗಗಳು ಬಾಧಿಸಿದ ಮೇಲೆ ಎಚ್ಚೆತ್ತುಕೊಳ್ಳುವುದಕ್ಕಿಂತ ಮುಂಚಿತವಾಗಿಯೇ ಎಚ್ಚರಗೊಳ್ಳುವುದು ಕ್ಷೇಮ. ವಿಷಕಾರಿ ಅನಿಲ ಹೊರಸೂಸುವ ಮತ್ತು ಪರಿಸರಕ್ಕೆ ಮಾರಕವಾಗಿರುವ ಕಾರ್ಖಾನೆಗಳನ್ನು ಈ ಭಾಗದಿಂದ ತೊಲಗಿಸಲು ಇದು ಸರಿಯಾದ ಸಮಯ. ಕೊಪ್ಪಳದ ಭವಿಷ್ಯದ ದೃಷ್ಟಿಯಿಂದ ಪ್ರತಿಯೊಬ್ಬರೂ ಈ ಹೋರಾಟದಲ್ಲಿ ಪಾಲ್ಗೊಳ್ಳಬೇಕು," ಎಂದು ಅವರು ಕರೆ ನೀಡಿದರು.
ಈ ಆಂದೋಲನದಲ್ಲಿ ಉದ್ಯಮಿ ಗವಿಸಿದ್ದಪ್ಪ ಮುದಗಲ್, ಪರಮೇಶ್ವರಪ್ಪ ಕೊಪ್ಪಳ, ಮಾನವಿಯ ಶರಣಬಸವ ಬೆಟ್ಟದೂರು ಅವರು ಬೆಂಬಲಿಸಿ ಮಾತನಾಡಿದರು.
ಕೊಪ್ಪಳ ಜಿಲ್ಲಾ ಬಚಾವೋ ಆಂದೋಲನ ಸಮಿತಿ ಹಾಗೂ ಪರಿಸರ ಹಿತರಕ್ಷಣಾ ವೇದಿಕೆ ಇದರ ಜಂಟಿ ಕ್ರಿಯಾ ವೇದಿಕೆ ಪ್ರಧಾನ ಸಂಚಾಲಕ ಅಲ್ಲಮಪ್ರಭು ಬೆಟ್ಟದೂರು, ಬಿ.ಜಿ. ಕರಿಗಾರ, ರವಿ ಕಾಂತನವರ, ಎಸ್.ಬಿ.ರಾಜೂರು, ಶಂಭುಲಿಂಗಪ್ಪ ಹರಗೇರಿ, ಸಂಚಾಲಕ ಮಲ್ಲಿಕಾರ್ಜುನ ಬಿ. ಗೋನಾಳ, ಆಂದೋಲನ ಯುವ ಮುಂದಾಳು ಸುಭಾನ್ ನೀರಲಗಿ, ಮಂಜುನಾಥ ಕವಲೂರು, ಶರಣು ಪಾಟೀಲ್, ಸಂಚಾಲಕರಾದ ಮಂಜುನಾಥ ಜಿ. ಗೊಂಡಬಾಳ, ಶರಣು ಗಡ್ಡಿ, ಮಹಾಂತೇಶ ಕೊತಬಾಳ, ಸದಾಶಿವ್ ಪಾಟೀಲ್, ಮೂಕಪ್ಪ ಮೇಸ್ತ್ರಿ ಬಸಾಪುರ, ಗವಿಸಿದ್ದಪ್ಪ ಹಲಿಗಿ, ಮಹಾದೇವಪ್ಪ ಮಾವಿನಮಡು, ಅಮಿತ್ ಮಾಲಗಿತ್ತಿ, ವಿಜಯ ಮಹಾಂತೇಶ ಹಟ್ಟಿ, ಶಿವಪ್ಪ ಜಲ್ಲಿ, ಮಖ್ಬುಲ್ ರಾಯಚೂರು, ವಿದ್ಯಾರ್ಥಿಗಳು ಇದ್ದರು.







