Koppal | ಒಡೆದ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ; ಶಾಸಕ- ಸಚಿವರ ವಿರುದ್ಧ ಬಸವರಾಜ ಕ್ಯಾವಟರ್ ಆಕ್ರೋಶ

ಕೊಪ್ಪಳ: ತಾಲೂಕಿನ ಮುನಿರಾಬಾದ ಸಮೀಪದ ಬಸಾಪುರ ಹಾಗೂ ಬಂಡಿ ಹರ್ಲಾಪುರ ಗ್ರಾಮಗಳ ನಡುವಿನ 13ನೇ ಮೈಲಿಯ ವ್ಯಾಪ್ತಿಯ ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆ ಒಡೆದ ಸ್ಥಳಕ್ಕೆ ಬುಧವಾರ ಕೊಪ್ಪಳ ಲೋಕಸಭಾ ಕ್ಷೇತ್ರದ ನಿಕಟಪೂರ್ವ ಬಿಜೆಪಿ ಅಭ್ಯರ್ಥಿ ಬಸವರಾಜ ಕ್ಯಾವಟರ್ ಸೇರಿ ಬಿಜೆಪಿ ಮುಖಂಡರು ಭೇಟಿ ನೀಡಿ ಪರಿಶೀಲಿಸಿದರು.
ಕಾಲುವೆಯಿಂದ ಅಪಾರ ಪ್ರಮಾಣದ ನೀರು ನದಿ ಪಾತ್ರಕ್ಕೆ ಹರಿದು ವ್ಯರ್ಥವಾಗಿದ್ದಲ್ಲದೇ ರೈತರ ಬೆಳೆ ಹಾಳಾಗಿರುವುದನ್ನು ನೋಡಿ ಅಸಮಾಧಾನ ವ್ಯಕ್ತಪಡಿಸಿದರು.
ಅಲ್ಲದೆ, ಕಾಲುವೆ ಆಧುನೀಕರಣ ಮಾಡದ ಸರಕಾರದ ನಿರ್ಧಾರ ಖಂಡಿಸಿದರು.
ಈ ವಿಚಾರದಲ್ಲಿ ನೀರಾವರಿ ಸಲಹಾ ಸಮಿತಿ ಅಧ್ಯಕ್ಷರಾಗಿರುವ ಸಚಿವ, ಶಿವರಾಜ್ ತಂಗಡಗಿ ಹಾಗೂ ಶಾಸಕ ರಾಘವೇಂದ್ರ ಹಿಟ್ನಾಳ್ ಅವರ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ. ಸಕಾಲಕ್ಕೆ ಎಚ್ಚೆತ್ತುಕೊಂಡು ಕಾಲುವೆ ಕಾಮಗಾರಿ ಆಧುನೀಕರಣ ಮುಗಿಸಿದ್ದರೆ ಇಷ್ಟೊಂದು ಸಮಸ್ಯೆಯಾಗುತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ರೈತರೊಂದಿಗೆ ಸೇರಿ ಸ್ಥಳದಲ್ಲಿ ಪ್ರತಿಭಟನೆ ನಡೆಸಿದರು.
ತುಂಗಭದ್ರಾ ಜಲಾಶಯದಿಂದ ದಿಢೀರನೇ ನೀರಿನ ಹರಿವನ್ನು 200 ಕ್ಯೂಸೆಕ್ ದಿಂದ 2000 ಕ್ಯೂಸೆಕ್ ಗೆ ಹೆಚ್ಚಿಸಿದರ ಪರಿಣಾಮ ಈ ಸಮಸ್ಯೆ ಅನುಭವಿಸಿದೆ.
ಕಳೆದ ಮೂರು ತಿಂಗಳುಗಳ ಹಿಂದೆಯೇ ಎಡದಂಡೆ ಕಾಲುವೆಯಲ್ಲಿ ರಂದ್ರ ಬಿದ್ದಿರುವ ಬಗ್ಗೆ ಸ್ಥಳೀಯ ಗ್ರಾಮಸ್ಥರು ಅಧಿಕಾರಿಗಳಿಗೆ ಮಾಹಿತಿ ನೀಡಿ ಸರಿಪಡಿಸಲು ಅಗ್ರಹಿಸಿದ್ದರು. ಆದರೆ, ಕಾಳಜಿ ವಹಿಸಬೇಕಾದ ಅಧಿಕಾರಿಗಳು ಕೂಡ ಈ ಸಮಸ್ಯೆಯ ಬಗ್ಗೆ ನಿರ್ಲಕ್ಷತೋರಿಸಿದರ ಪರಿಣಾಮ ಕಾಲುವೆ ಒಡೆದು ನೀರು ವ್ಯರ್ಥವಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ
ಬೇಸಿಗೆ ಹಿನ್ನಲೆಯಲ್ಲಿ ಕೊಪ್ಪಳ ಹಾಗೂ ರಾಯಚೂರು ನಗರ ಪ್ರದೇಶಗಳು ಹಾಗೂ ಗ್ರಾಮೀಣ ಪ್ರದೇಶಗಳಿಗೆ ಮತ್ತು ಕೆರೆಗಳಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಕಾಲುವೆಗೆ ನೀರು ಹರಿಸಲಾಗುತ್ತಿತ್ತು.
ರಾಜ್ಯ ಕಾಂಗ್ರೆಸ್ ಸರಕಾರ ಮೊದಲಿಂದಲೂ ತುಂಗಭದ್ರಾ ಎಂದರೇ ತುಂಬಾ ನಿರ್ಲಕ್ಷ ತೋರಿಸುತ್ತಿರುವುದು ನಮಗೆಲ್ಲ ತಿಳಿದಿರುವ ಸಂಗತಿಯಾಗಿದೆ. ಇದೇ ಸಂಧರ್ಭದಲ್ಲಿ ಈ ಘಟನೆ ರಾಜ್ಯ ಸರಕಾರದ ನಿರ್ಲಕ್ಷಕ್ಕೆ ಮತ್ತೊಂದು ನಿದರ್ಶನವಾಗಿದೆ ಎಂದು ಕ್ಯಾವಟರ್ ಅವರು ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭ ಮಹಾಂತೇಶ್ ಪಾಟೀಲ್ ಮೈನಳ್ಳಿ, ಬಿಜೆಪಿ ನಗರ ಘಟಕ ಅಧ್ಯಕ್ಷ ಅಮರೇಶ ಮುರುಳಿ, ಪ್ರದೀಪ್ ಹಿಟ್ನಾಳ್, ಪ್ರಭುಗೌಡ ಹುಲಿಗಿ, ಗಣೇಶ ಹೊರತಟ್ನಾಳ್, ವಸಂತ ನಾಯಕ್, ರವಿ ಹೊಸಳ್ಳಿ, ಹನುಮಂತಪ್ಪ ಹುಲಿಗಿ, ಹೈದರ್ ಅಲಿ, ನರಸಿಂಹಲ್ಲು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.







